'ಸಿಎಂ ಯಡಿಯೂರಪ್ಪ ಊಟ ಮಾಡಲು ಕಲಬುರಗಿಗೆ ಬಂದು ಹೋಗಿರಬಹುದು...'

CM BSY
Published on

ಕಲಬುರಗಿ: ಇವತ್ತು ದಸರಾ ಇದ್ರು ಕೂಡ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಪ್ರವಾಹಪೀಡಿತ ಪ್ರದೇಶದಲ್ಲಿ ಪ್ರವಾಸ ಮಾಡ್ತಿದ್ದೇನೆ. ಈ ವರ್ಷ ಮೂರು ಬಾರಿ ಪ್ರವಾಹ ಬಂತು. ಭೀಮಾ ನದಿ ಪ್ರವಾಹ ಮತ್ತು ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ರೈತರು ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆದ್ರೂ ಈ ಸರ್ಕಾರ ಏನ್ ಮಾಡ್ತಿದೆ ಎಂದು ನನಗಂತೂ ಗೊತ್ತಿಲ್ಲ. ಕಂದಾಯ ಸಚಿವರು ಪಿಕ್​ನಿಕ್​ಗೆ ಬಂದಂತೆ ಬಂದು ಹೋಗಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಊಟ ಮಾಡಲು ಕಲಬುರಗಿಗೆ ಬಂದು ಹೋಗಿರಬಹುದು...

ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ಹರಿಯಾಯ್ದ ಪರಿ ಇದು. ಪ್ರವಾಹಪೀಡಿತ ಸ್ಥಳ ವೀಕ್ಷಣೆಗೆ ತೆರಳುವ ಮುನ್ನ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆದರೆ ಅವರು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸದೆ ಹೋಗಿದ್ದಾರೆ. ಇದು ಜನಪ್ರತಿನಿಧಿಗಳ ಸರ್ಕಾರವೇ ಅಲ್ಲ. ಕೇಂದ್ರ, ರಾಜ್ಯ ಸರ್ಕಾರ ಆಗಲಿ ನೆರೆ ಪರಿಹಾರಕ್ಕೆ ಒಂದೇ ಒಂದು ಪೈಸೆ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.

ಧಮ್​ ಪದವನ್ನು ಮತ್ತೊಮ್ಮೆ ಪುನರುಚ್ಛರಿಸಿದ ಸಿದ್ದರಾಮಯ್ಯ, ಡಿಸಿಎಂ ಅಶ್ವಥನಾರಾಯಣಗೆ ಹತ್ತು ಪಟ್ಟು ಧಮ್ ಇರಲಿ. ಅವರಿಗೆ ಧಮ್ ಇದ್ದರೆ ಪ್ರಧಾನಿ ಮೋದಿ ಮುಂದೆ ಕೂತು ರಾಜ್ಯಕ್ಕೆ ಬರಬೇಕಾದ ಪರಿಹಾರ ತಗೆದುಕೊಂಡು ಬರಲಿ. ‌ರಾಜ್ಯದಲ್ಲಿ 25 ಸಂಸದರು ಇದ್ದರೂ ಪ್ರಯೋಜನವಿಲ್ಲ ಎಂದು ತಿರುಗೇಟು ನೀಡಿದರು. ಧಮ್ ಅನ್ನೊ ಪದಕ್ಕೆ ವಿಶ್ಲೇಷಣೆ ಬೇಕಿಲ್ಲ, ನಾನು ಹೇಳಿದ್ದು ಕೇಂದ್ರದ ನೆರವು ತರುವಲ್ಲಿ ಎಂದರು.

ನೆರೆ ಸಂತ್ರಸ್ಥರಿಗೆ ಇನ್ನೂ ನಯಾ ಪೈಸೆ ಹಣ ನೀಡಿಲ್ಲ. ‌ಸಿಎಂ ಯಡಿಯೂರಪ್ಪ ವೈಮಾನಿಕ ಸಮೀಕ್ಷೆಯಿಂದ ಯಾವುದೇ ಪ್ರಯೋಜನ ಇಲ್ಲ. ಅವರು ಜನರ ಜೊತೆ ಮಾತನಾಡಿಲ್ಲ. ನೆರೆಪೀಡಿತ ಪ್ರದೇಶಗಳಿಗೆ ಹೋಗಿಲ್ಲ ಎಂದು ವಾಗ್ದಾಳಿ ‌ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net