

ವಾಷಿಂಗ್ಟನ್: ಚೀನಾ ವಿರುದ್ಧದ ತನ್ನ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸಿರುವ ಅಮೆರಿಕ, ಕಳೆದ ಎರಡು ದಶಕಗಳಲ್ಲಿ ಐದು ಸಾಂಕ್ರಾಮಿಕ ಮಹಾಮಾರಿಗಳು ಚೀನಾದಿಂದಲೇ ಉದ್ಭವಿಸಿವೆ ಎಂದು ಮತ್ತೊಂದು ಬಾಂಬ್ ಸಿಡಿಸಿದೆ.
ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ'ಬ್ರಿಯಾನ್, ಕಳೆದ ಇಪ್ಪತ್ತು ವರ್ಷಗಳಲ್ಲಿ ಚೀನಾದಿಂದ 5 ಸಾಂಕ್ರಾಮಿಕ ಮಹಾಮಾರಿಗಳು ಹುಟ್ಟಿಕೊಂಡು ಜಗತ್ತನ್ನು ವ್ಯಾಪಿಸಿವೆ. ಇದೆಲ್ಲವೂ ಒಂದು ಹಂತದಲ್ಲಿ ಕೊನೆಗಾಣಲೇಬೇಕು ಎಂದು ಎಚ್ಚರಿಸಿದ್ದಾರೆ.
ಜಗತ್ತಿನಾದ್ಯಂದ 2.5 ಲಕ್ಷಕ್ಕೂ ಹೆಚ್ಚು ಬಲಿ ಪಡೆದಿರುವ, 42 ಲಕ್ಷಕ್ಕೂ ಅಧಿಕ ಜನರಿಗೆ ಅಂಟಿಕೊಂಡಿರುವ ಕರೊನಾ ವೈರಸ್ ಹರಡುವುದಕ್ಕೆ ಚೀನಾವನ್ನೇ ಹೊಣೆಯಾಗಿಸಿದ್ದಾರೆ.
ಇದನ್ನೂ ಓದಿ; ವಿಶಾಖಪಟ್ಟಣ ವಿಷಾನಿಲ ದುರಂತಕ್ಕೆ ಯಾರೂ ಕಾರಣರಲ್ಲ…!
ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಬರ್ಟ್, ಚೀನಾದ ಪ್ರಯೋಗಾಲಯಗಳಿರಲಿ ಅಥವಾ ಜೀವಂತ ಪ್ರಾಣಿಗಳ ಮಾಂಸ ಮಾರಾಟ ಮಾಡುವ ಮಾರುಕಟ್ಟೆಗಳಿರಲಿ, ಸಾಂಕ್ರಾಮಿಕ ಮಾರಿಗಳು ಚೀನಾದಿಂದ ಉದ್ಭವಿಸಿ ವ್ಯಾಪಿಸುವುದನ್ನು ಸಹಿಸಲಾಗುವುದಿಲ್ಲ. ಹೀಗೆಂದು ಇಡೀ ಜಗತ್ತು ಒಂದಾಗಿ ಎದ್ದು ನಿಂತು ಚೀನಾಗೆ ಹೇಳಲಿದೆ ಎಂದು ರಾಬರ್ಟ್ ಪ್ರತಿಪಾದಿಸಿದರು.
ಕರೊನಾ ವೈರಸ್ ಚೀನಾದ ವುಹಾನ್ ನಗರದಿಂದಲೇ ಹರಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರ ಜನ್ಮಸ್ಥಳ ಪ್ರಯೋಗಾಲಯ ಅಥವಾ ಮಾಂಸ ಮಾರುಕಟ್ಟೆಯೇ ಆಗಿದೆ ಎಂಬುದಕ್ಕೆ ಸಾಂದರ್ಭಿಕ ಸಾಕ್ಷ್ಯಗಳಿವೆ ಎಂದು ಹೇಳಿದರು.
ಇದನ್ನೂ ಓದಿ; ಜಗತ್ತಿನ ಅತಿ ದುಬಾರಿ ಲಸಿಕೆಯಾಗಲಿದೆಯೇ ಕರೊನಾ ಔಷಧ ?
ಕಳೆದ ಎರಡು ದಶಕಗಳಲ್ಲಿ ಚೀನಾದಿಂದ ಐದು ಸಾಂಕ್ರಾಮಿಕ ರೋಗಗಳ ವೈರಸ್ ಹರಡಿದೆ. ಸಾರ್ಸ್, ಏವಿಯನ್ ಫ್ಲೂ, ಸ್ವೈನ್ ಫ್ಲೂ ಹಾಗೂ ಕರೊನಾ ವೈರಸ್ ಎಂದು ರಾಬರ್ಟ್ ಹೆಸರಿಸಿದರು. ಆದರೆ, ಐದನೇ ವೈರಸ್ ಯಾವುದು ಎಂದು ಹೇಳಲಿಲ್ಲ. ಚೀನಾದಿಂದ ಹರಡಿ ಜಗತ್ತಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೇ ಗಂಡಾಂತರಕ್ಕೆ ಸಿಲುಕಿಸಿರುವ ಸ್ಥಿತಿಯನ್ನು ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು ಎಂದು ರಾಬರ್ಟ್ ಪ್ರಶ್ನಿಸಿದರು.
ಸದ್ಯ ಅಮೆರಿಕದಲ್ಲಿ 13.7 ಲಕ್ಷ ಜನರು ಕರೊನಾ ಸೋಂಕಿತರಾಗಿದ್ದರೆ, 82 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.