ಕೇಂದ್ರದಿಂದ ಬಡವರ ಖಾತೆಗೆ ಬರಲಿದೆ ಮತ್ತೊಂದು ಸುತ್ತಿನ ಹಣ..?

Migrant workers
Published on

ನವದೆಹಲಿ: ದೇಶದ ಆರ್ಥಿಕ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್​ ಘೋಷಿಸಿದ್ದಾರೆ. ಇದರಲ್ಲಿ ಏನೇನು ಇರಲಿದೆ. ಯಾರಿಗೆಲ್ಲ ಅನುಕೂಲವಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಈ ಪ್ಯಾಕೇಜ್​ನ ವಿಸ್ತೃತ ಮಾಹಿತಿಯನ್ನು ನೀಡಲಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈಗಾಗಲೇ ಘೋಷಿಸಲಾಗಿರುವ ಆರ್ಥಿಕ ನೆರವಿನ ಯೋಜನೆಯನ್ನೂ ಒಳಗೊಂಡು ಇದರ ಗಾತ್ರ 20 ಲಕ್ಷ ಕೋಟಿ ರೂ. ಆಗಿರಲಿದೆ.

ಈ ಹಿಂದೆ ಜನ್​ಧನ್​ ಖಾತೆಗಳಿಗೆ ಮೂರು ತಿಂಗಳ ಅವಧಿಗೆ ತಲಾ ಐನೂರು ರೂ.ಗಳಂತೆ ಪಾವತಿ, ಕಾರ್ಮಿಕರಿಗೆ ಆರ್ಥಿಕ ನೆರವು, ಬ್ಯಾಂಕುಗಳು ಘೋಷಿಸಿದ್ದ ವಿನಾಯ್ತಿ ಮೊದಲಾದವುಗಳು ಕೂಡ ಈ ಪ್ಯಾಕೇಜ್​ನಲ್ಲಿ ಒಳಗೊಂಡಿವೆ. ಹೀಗಾಗಿ ನೈಜ ಪ್ಯಾಕೇಜ್​ನ ಮೊತ್ತ 12 ಲಕ್ಷ ಕೋಟಿ ರೂ. ಆಗಿರಲಿವೆ ಎಂದು ಅಂದಾಜಿಸಲಾಗಿದೆ.

ಹಾಗಿದ್ದರೆ, ಈ ಬಾರಿ ನಿರೀಕ್ಷಿಸಬಹುದಾದ ನೆರವು ಏನು ಎಂಬುದು ಪ್ರಶ್ನೆ. ಕೃಷಿಯಿಂದ ಆರಂಭಿಸಿ ಕೈಗಾರಿಕೆವರೆಗಿನ ಎಲ್ಲ ಕ್ಷೇತ್ರಗಳನ್ನು ಒಳಗೊಂಡಂತೆ ಸಮಗ್ರ ಯೋಜನೆಗೆ ಬುಧವಾರ (ಮೇ 13) ಕೇಂದ್ರ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಬಳಿಕ ಇದರ ಅಧಿಕೃತ ಘೋಷಣೆಯಾಗಲಿದೆ.

ಬಡವರ ಖಾತೆಗಳಿಗೆ ಮತ್ತೊಂದು ಸುತ್ತಿನ ನಗದು ವರ್ಗಾವಣೆ, ಕೈಗಾರಿಕೆಗಳಿಗೆ ಬಂಡವಾಳ ಕಲ್ಪಿಸಲು ಸಾಲ ಸೌಲಭ್ಯ ನೀಡಲಾಗುತ್ತದೆ. ಜತೆಗೆ ಬ್ಯಾಂಕಿಂಗ್​ ಹಾಗೂ ವಿಮಾ ಕ್ಷೇತ್ರಕ್ಕೂ ಉತ್ತೇಜನ ದೊರೆಯಲಿದೆ ಎಂದು ಈ ಯೋಜನೆಯನ್ನು ಬಲ್ಲ ಮೂಲಗಳು ತಿಳಿಸಿವೆ.

ಲಾಕ್​ಡೌನ್​ನಿಂದಾಗಿ ಸಂಘಟಿತ ವಲಯದ ಶೇ.67 ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಜತೆಗೆ, ನಗರ ಪ್ರದೇಶದಲ್ಲಿ ಶೇ.80 ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಕ್ಷೇತ್ರಕ್ಕೆ ನೆರವು ನೀಡುವುದು ಅನಿವಾರ್ಯವಾಗಿದೆ. ಕೈಗಾರಿಕೆ ಅದರಲ್ಲೂ ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಭಾರಿ ಉತ್ತೇಜನ ದೊರೆಯುವ ನಿರೀಕ್ಷೆಯಿದೆ ಅಂದಾಜು 3 ಲಕ್ಷ ಕೋಟಿ ರೂ. ಕೈಗಾರಿಕೆ ಕ್ಷೇತ್ರಕ್ಕೆ ಮೀಸಲಾಗಿರಲಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net