ಕೆಲವೇ ಕ್ಷಣಗಳಲ್ಲಿ ISSನತ್ತ ಭಾರತ: ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆಯ ಒಳಗೆ ಕುಳಿತ ಶುಭಾಂಶು ಶುಕ್ಲಾ! Shubhanshu Shukhla

Shubhanshu Shukhla
Published on

Shubhanshu Shukhla : ಸುಮಾರು 40 ವರ್ಷಗಳ ಬಳಿಕ ಭಾರತವು ಮತ್ತೆ ಬಾಹ್ಯಾಕಾಶ ನಿಲ್ದಾಣದತ್ತ ಹಾರಲು ಕಾತರದಿಂದ ಕಾಯುತ್ತಿರುವಾಗ, ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆಯ ಒಳಗಿನ ಮೊದಲ ದೃಶ್ಯಗಳು ಟಿವಿ ಪರದೆಗಳಲ್ಲಿ ಮಿನುಗುತ್ತಿವೆ. ಇಂದು ಮಧ್ಯಾಹ್ನ 12.01 ಕ್ಕೆ ನಿಗದಿಯಾಗಿರುವ ದೊಡ್ಡ ಉಡಾವಣೆಗೆ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಜ್ಜಾಗಿರುವುದನ್ನು ದೃಶ್ಯಗಳು ತೋರಿಸುತ್ತವೆ.

ಫಾಲ್ಕನ್-9 ರಾಕೆಟ್‌ನಲ್ಲಿ ಹಾರುವ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಉಡಾವಣೆಗೊಳ್ಳಲಿದೆ. 1969 ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಅಪೊಲೊ 11ರಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಿದ ಅದೇ ಸ್ಥಳ ಇದು.

1984ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಮಾಡಿದ ನಾಲ್ಕು ದಶಕಗಳ ನಂತರ, ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಭಾರತದ ಎರಡನೇ ಗಗನಯಾತ್ರಿಯಾಗಲಿದ್ದಾರೆ. ಭಾರತೀಯ ವಾಯುಪಡೆಯ ಪೈಲಟ್ ಶುಭಾಂಶು ಶುಕ್ಲಾ ಆರೋಗ್ಯವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.

ಗ್ರೂಪ್ ಕ್ಯಾಪ್ಟನ್ ಶುಕ್ಲಾ ಮಾತ್ರವಲ್ಲದೆ, ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಮತ್ತು ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್ ಬಾಹ್ಯಾಕಾಶ ನೌಕೆಯಲ್ಲಿದ್ದಾರೆ. ಆಕ್ಸಿಯಮ್ -4 ಮಿಷನ್‌ನ ನಾಲ್ಕು ಸದಸ್ಯರ ತಂಡವು ಹದಿನೈದು ದಿನಗಳ ಕಾಲ ನಡೆಯುವ ಕಾರ್ಯಾಚರಣೆಯಲ್ಲಿ 60 ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದು, ಅವುಗಳಲ್ಲಿ ಏಳು ಪ್ರಯೋಗಗಳನ್ನು ಭಾರತೀಯ ಸಂಶೋಧಕರು ಪ್ರಸ್ತಾಪಿಸಿದ್ದಾರೆ.

ಆಕ್ಸಿಯಮ್ -4 ಮಿಷನ್ ಉಡಾವಣೆ ಆರಂಭದಲ್ಲಿ ಮೇ 29 ಕ್ಕೆ ನಿಗದಿಯಾಗಿತ್ತು, ಆದರೆ ತಾಂತ್ರಿಕ ಮತ್ತು ಹವಾಮಾನ ಕಾರಣಗಳಿಂದ ಜೂನ್ 8ಕ್ಕೆ ಮುಂದೂಡಲಾಯಿತು. ಮತ್ತೆ ಜೂನ್ 10, ಜೂನ್ 11 ಮತ್ತು ಜೂನ್ 12ಕ್ಕೆ ಮುಂದೂಡಲಾಯಿತು. ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆಯಲ್ಲಿ ಸೋರಿಕೆಯಿಂದಾಗಿ, ಉಡಾವಣೆಯನ್ನು ಮತ್ತೆ ಜೂನ್ 19ಕ್ಕೆ ಮುಂದೂಡಲಾಯಿತು. ಅನಿವಾರ್ಯ ಕಾರಣಗಳಿಂದ ಮತ್ತೆ ಜೂನ್ 22ಕ್ಕೆ ಮುಂದೂಡಲಾಯಿತು. ಇದೀಗ ಜೂನ್ 25 ರಂದು ಪ್ರಯಾಣ ಪ್ರಾರಂಭವಾಗುತ್ತಿದೆ. ಪ್ರಪಂಚದಾದ್ಯಂತ ಜನರು ಪ್ರಯಾಣ ಯಶಸ್ವಿಯಾಗಬೇಕೆಂದು ಬಯಸುತ್ತಿದ್ದಾರೆ. ನಮ್ಮ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ ಒಳ್ಳೆಯದಾಗಲಿ ಎಂದು ಭಾರತೀಯರು ಶುಭ ಹಾರೈಸುತ್ತಿದ್ದಾರೆ.

ಯಾರು ಈ ಶುಭಾಂಶು ಶುಕ್ಲಾ?

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ತರಬೇತಿ ಪಡೆದ ವಾಯುಪಡೆಯ ಪೈಲಟ್. ಅವರನ್ನು ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ (HSP) ಅಡಿಯಲ್ಲಿ ಆಯ್ಕೆ ಮಾಡಲಾಯಿತು. ಅವರು ಭಾರತದ ಮೊದಲ ಸ್ಥಳೀಯವಾಗಿ ಮಾನವಸಹಿತ ಗಗನಯಾನ ಕಾರ್ಯಾಚರಣೆಗೆ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು. 2006ರಲ್ಲಿ ಭಾರತೀಯ ವಾಯುಪಡೆಗೆ ಫೈಟರ್ ಪೈಲಟ್ ಆಗಿ ಸೇರಿದರು. ಸುಖೋಯ್-30 MKI, MiG-21, MiG-29, ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು An-32 ನಂತಹ ವಿಮಾನಗಳನ್ನು ಹಾರಿಸಿದ್ದಾರೆ. ಆಗಸದಲ್ಲಿ 2,000 ಗಂಟೆಗಳಿಗೂ ಹೆಚ್ಚು ಕಾಲ ಹಾರಾಡಿದ ಅನುಭವವನ್ನು ಹೊಂದಿದ್ದಾರೆ. 1999ರ ಕಾರ್ಗಿಲ್ ಯುದ್ಧದಿಂದ ಪ್ರೇರಿತರಾಗಿ ಶುಕ್ಲಾ ಸೈನ್ಯಕ್ಕೆ ಸೇರಿದರು.

2006, ಜೂನ್ ತಿಂಗಳಲ್ಲಿ ಐಎಎಫ್ ಫೈಟರ್ ವಿಂಗ್ ಸೇರುವ ಮೂಲಕ ಶುಕ್ಲಾ ಅವರ ಪ್ರಯಾಣ ಪ್ರಾರಂಭವಾಯಿತು. 2024, ಮಾರ್ಚ್ ತಿಂಗಳಲ್ಲಿ ಅವರಿಗೆ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಯಿತು. 2019ರಲ್ಲಿ ಶುಕ್ಲಾ ಅವರಿಗೆ ಇಸ್ರೋದಿಂದ ಕರೆ ಬಂತು. ರಷ್ಯಾದ ಮಾಸ್ಕೋದ ಸ್ಟಾರ್ ಸಿಟಿಯಲ್ಲಿರುವ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಶುಕ್ಲಾ ಕಠಿಣ ತರಬೇತಿಯನ್ನು ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net