40 ವರ್ಷದ ಬಳಿಕ ISS​ನತ್ತ ಭಾರತ: ಕೆಲವೇ ಗಂಟೆಗಳಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ ಶುಭಾಂಶು ಶುಕ್ಲಾ! Shubhanshu Shukla

Shubhanshu Shukla
Published on

Shubhanshu Shukla : ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು (ಜೂನ್​ 25) ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಮೂಲಕ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಎಂಬ ದಾಖಲೆಯನ್ನು ಬರೆಯಲಿದ್ದಾರೆ.

ವಿಂಗ್ ಕಮಾಂಡರ್ ರಾಕೇಶ್ ಶರ್ಮಾ 1984ರಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದರು. ಇದಾದ ಸುಮಾರು ನಾಲ್ಕು ದಶಕಗಳ ನಂತರ, 39 ವರ್ಷದ ಶುಭಾಂಶು ಶುಕ್ಲಾ ಆ ದಾಖಲೆಯನ್ನು ಪುನಃ ಬರೆಯುತ್ತಿದ್ದಾರೆ. ಶುಭಾಂಶು ಶುಕ್ಲಾ ಅವರು ಅಮೆರಿಕ, ಪೋಲೆಂಡ್ ಮತ್ತು ಹಂಗೇರಿಯ ಮೂವರು ಗಗನಯಾತ್ರಿಗಳೊಂದಿಗೆ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಿದ್ದಾರೆ.

ಆಕ್ಸಿಯಮ್ -4 ಮಿಷನ್ ಬುಧವಾರ ಮಧ್ಯಾಹ್ನ 12.01 ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದೆ ಎಂದು ನಾಸಾ ಈಗಾಗಲೇ ಘೋಷಿಸಿದೆ. ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುವುದು. 1969ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಇದೇ ಸ್ಥಳದಿಂದ ಚಂದ್ರನ ಪ್ರದೇಶಕ್ಕೆ ಹೋಗಿದ್ದರು ಎಂಬುದು ಗಮನಾರ್ಹ. ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆಗಿದ್ದ 39 ವರ್ಷದ ಶುಭಾಂಶು ಶುಕ್ಲಾ ಅವರನ್ನು ಇಸ್ರೋ ಮುಖ್ಯ ಗಗನಯಾತ್ರಿಯಾಗಿ ಆಯ್ಕೆ ಮಾಡಿದೆ.

ನಾಸಾದ ಮಾಜಿ ಗಗನಯಾತ್ರಿ ಪೆಗ್ಗಿ ವಿಟ್ಸನ್ ಆಕ್ಸಿಯಮ್ -4 ಮಿಷನ್ ಅನ್ನು ಮುನ್ನಡೆಸಲಿದ್ದಾರೆ. ಶುಭಾಂಶು ಶುಕ್ಲಾ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸುಮಾರು ಎರಡು ವಾರಗಳ ಕಾಲ ಅಲ್ಲಿಯೇ ಇರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ಸಮಯದಲ್ಲಿ, ಅವರು ಸಂಶೋಧನೆಯ ಜೊತೆಗೆ ಹಲವಾರು ಪ್ರಯೋಗಗಳನ್ನು ನಡೆಸಲಿದ್ದಾರೆ.

ಹವಾಮಾನ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಆಕ್ಸಿಯಮ್ -4 ಮಿಷನ್ ಉಡಾವಣೆಯನ್ನು ಆರು ಬಾರಿ ಮುಂದೂಡಲಾಗಿದೆ. ಆಕ್ಸಿಯಮ್ -4 ಮಿಷನ್ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಉಡಾವಣೆಗೊಳ್ಳಲಿದೆ. ಈ ಕಾರ್ಯಾಚರಣೆಯನ್ನು ಅಮೆರಿಕನ್ ವಾಣಿಜ್ಯ ಬಾಹ್ಯಾಕಾಶ ಕಂಪನಿ ಆಕ್ಸಿಯಮ್ ಸ್ಪೇಸ್ ನಿರ್ವಹಿಸುತ್ತಿದೆ. ಇಸ್ರೋ, ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ಸಹ ಇದರಲ್ಲಿ ಭಾಗವಹಿಸುತ್ತಿವೆ. ಬಾಹ್ಯಾಕಾಶ ಕ್ಯಾಪ್ಸುಲ್ ಅನ್ನು ಫಾಲ್ಕನ್ -9 ರಾಕೆಟ್‌ನಲ್ಲಿ ಸಾಗಿಸಲಾಗುತ್ತಿದೆ. 28 ಗಂಟೆಗಳ ನಂತರ, ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಆಕ್ಸಿಯಮ್ -4 ಮಿಷನ್ ಉಡಾವಣೆ ಆರಂಭದಲ್ಲಿ ಮೇ 29 ಕ್ಕೆ ನಿಗದಿಯಾಗಿತ್ತು, ಆದರೆ ತಾಂತ್ರಿಕ ಮತ್ತು ಹವಾಮಾನ ಕಾರಣಗಳಿಂದ ಜೂನ್ 8ಕ್ಕೆ ಮುಂದೂಡಲಾಯಿತು. ಮತ್ತೆ ಜೂನ್ 10, ಜೂನ್ 11 ಮತ್ತು ಜೂನ್ 12ಕ್ಕೆ ಮುಂದೂಡಲಾಯಿತು. ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆಯಲ್ಲಿ ಸೋರಿಕೆಯಿಂದಾಗಿ, ಉಡಾವಣೆಯನ್ನು ಮತ್ತೆ ಜೂನ್ 19ಕ್ಕೆ ಮುಂದೂಡಲಾಯಿತು. ಅನಿವಾರ್ಯ ಕಾರಣಗಳಿಂದ ಮತ್ತೆ ಜೂನ್ 22ಕ್ಕೆ ಮುಂದೂಡಲಾಯಿತು. ಇದೀಗ ಜೂನ್ 25 ರಂದು ಪ್ರಯಾಣ ಪ್ರಾರಂಭವಾಗುತ್ತಿದೆ. ಪ್ರಪಂಚದಾದ್ಯಂತ ಜನರು ಪ್ರಯಾಣ ಯಶಸ್ವಿಯಾಗಬೇಕೆಂದು ಬಯಸುತ್ತಿದ್ದಾರೆ. ನಮ್ಮ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ ಒಳ್ಳೆಯದಾಗಲಿ ಎಂದು ಭಾರತೀಯರು ಶುಭ ಹಾರೈಸುತ್ತಿದ್ದಾರೆ.

ಯಾರು ಈ ಶುಭಾಂಶು ಶುಕ್ಲಾ?

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ತರಬೇತಿ ಪಡೆದ ವಾಯುಪಡೆಯ ಪೈಲಟ್. ಅವರನ್ನು ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ (HSP) ಅಡಿಯಲ್ಲಿ ಆಯ್ಕೆ ಮಾಡಲಾಯಿತು. ಅವರು ಭಾರತದ ಮೊದಲ ಸ್ಥಳೀಯವಾಗಿ ಮಾನವಸಹಿತ ಗಗನಯಾನ ಕಾರ್ಯಾಚರಣೆಗೆ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು. 2006ರಲ್ಲಿ ಭಾರತೀಯ ವಾಯುಪಡೆಗೆ ಫೈಟರ್ ಪೈಲಟ್ ಆಗಿ ಸೇರಿದರು. ಸುಖೋಯ್-30 MKI, MiG-21, MiG-29, ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು An-32 ನಂತಹ ವಿಮಾನಗಳನ್ನು ಹಾರಿಸಿದ್ದಾರೆ. ಆಗಸದಲ್ಲಿ 2,000 ಗಂಟೆಗಳಿಗೂ ಹೆಚ್ಚು ಕಾಲ ಹಾರಾಡಿದ ಅನುಭವವನ್ನು ಹೊಂದಿದ್ದಾರೆ. 1999ರ ಕಾರ್ಗಿಲ್ ಯುದ್ಧದಿಂದ ಪ್ರೇರಿತರಾಗಿ ಶುಕ್ಲಾ ಸೈನ್ಯಕ್ಕೆ ಸೇರಿದರು.

2006, ಜೂನ್ ತಿಂಗಳಲ್ಲಿ ಐಎಎಫ್ ಫೈಟರ್ ವಿಂಗ್ ಸೇರುವ ಮೂಲಕ ಶುಕ್ಲಾ ಅವರ ಪ್ರಯಾಣ ಪ್ರಾರಂಭವಾಯಿತು. 2024, ಮಾರ್ಚ್ ತಿಂಗಳಲ್ಲಿ ಅವರಿಗೆ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಯಿತು. 2019ರಲ್ಲಿ ಶುಕ್ಲಾ ಅವರಿಗೆ ಇಸ್ರೋದಿಂದ ಕರೆ ಬಂತು. ರಷ್ಯಾದ ಮಾಸ್ಕೋದ ಸ್ಟಾರ್ ಸಿಟಿಯಲ್ಲಿರುವ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಶುಕ್ಲಾ ಕಠಿಣ ತರಬೇತಿಯನ್ನು ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net