ಸೋನಂ-ರಾಜ್ ಕುಶ್ವಾಹ ಈಗಾಗಲೇ... ಮೇಘಾಲಯ ಹನಿಮೂನ್​ ಕೊಲೆ ಪ್ರಕರಣದಲ್ಲಿ ದೊಡ್ಡ ತಿರುವು! Meghalaya Honeymoon Case ​

Meghalaya Honeymoon Case
Published on

Meghalaya Honeymoon Case : ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಲೆಕ್ಕವಿಲ್ಲದಷ್ಟು ತಿರುವುಗಳು ಹೊರಹೊಮ್ಮುತ್ತಿವೆ. ಪ್ರೇಯಸಿ ಸೋನಂ ಜತೆ ಸೇರಿ ಆಕೆಯ ಪತಿ ರಾಜಾ ರಘುವಂಶಿಯನ್ನು ಕೊಲ್ಲಲು ಸಂಚು ರೂಪಿಸಿದ ಪ್ರಿಯಕರ ರಾಜ್ ಕುಶ್ವಾಹ ಪೊಲೀಸರ ಮುಂದೆ ಮತ್ತೊಂದು ಸತ್ಯವನ್ನು ಬಹಿರಂಗಪಡಿಸಿದ್ದಾನೆ. ಅದೇನೆಂದರೆ, ಅವರಿಬ್ಬರು ತುಂಬಾ ವರ್ಷಗಳಿಂದ ಸಂಬಂಧದಲ್ಲಿದ್ದರು ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಪೂರ್ವ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಯೀಮ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ತುಂಬಾ ವರ್ಷದಿಂದ ಸಂಬಂಧದಲ್ಲಿ ಇದ್ದೆವು ಎಂದು ರಾಜ್ ಮತ್ತು ಸೋನಂ ತನಿಖೆಯ ವೇಳೆ ಒಪ್ಪಿಕೊಂಡಿದ್ದಾರೆ. ಈಗಾಗಲೇ ಕೊಲೆ ಅಪರಾಧವನ್ನು ಒಪ್ಪಿಕೊಂಡಿದ್ದು, ದೃಶ್ಯ ಪುನರ್ನಿರ್ಮಾಣದಲ್ಲಿ ಸಹಕರಿಸಿದ್ದಾರೆ ಮತ್ತು ಎಲ್ಲಾ ಪುರಾವೆಗಳನ್ನು ತೋರಿಸಿದ್ದಾರೆ. ಅದಕ್ಕಾಗಿಯೇ ಸೋನಂಗೆ ನಾರ್ಕೊ ಪರೀಕ್ಷೆಗಳ ಅಗತ್ಯವಿಲ್ಲ ಎಂದಿದ್ದಾರೆ.

ಯಾವುದೇ ಪುರಾವೆಗಳು ಲಭ್ಯವಿಲ್ಲದಿದ್ದಾಗ ಮಾತ್ರ ಸಾಮಾನ್ಯವಾಗಿ ನಾರ್ಕೊ ಪರೀಕ್ಷೆಯನ್ನು ಮಾಡಲಾಗುತ್ತದೆ. ಆದರೆ, ವಾಸ್ತವವಾಗಿ, ಸುಪ್ರೀಂ ಕೋರ್ಟ್ ನಾರ್ಕೊ ಪರೀಕ್ಷೆಯನ್ನು ನಿಷೇಧಿಸಿದೆ. ಕೇವಲ ತಪ್ಪೊಪ್ಪಿಗೆಗಳನ್ನು ಮಾತ್ರ ಪರಿಗಣಿಸುವ ಬದಲು, ಬಲವಾದ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಸಾಧ್ಯವಾದಷ್ಟು ಬೇಗ ಚಾರ್ಜ್‌ಶೀಟ್ ತಯಾರಿಸಲು ಪ್ರಯತ್ನಿಸುತ್ತಿದ್ದೇವೆ. ರಘುವಂಶಿ ಕೊಲೆಗೆ ಹಣ ಮುಖ್ಯ ಕಾರಣವಲ್ಲ. ಬದಲಾಗಿ, ತಮ್ಮ ಸಂಬಂಧಕ್ಕೆ ಅಡ್ಡಿಯಾಗಬಾರದು ಅಂತ ಕೊಲೆ ಮಾಡಿದ್ದಾರೆ ಎಂದು ವಿವೇಕ್ ಸಯೀಮ್ ತಿಳಿಸಿದರು.

ಮೇಘಾಲಯ ಪೊಲೀಸರು ಇತ್ತೀಚೆಗೆ ಇಂದೋರ್‌ನ ಫ್ಲಾಟ್‌ನ ಮಾಲೀಕ ಲೋಕೇಂದ್ರ ತೋಮರ್ ಅವರನ್ನು ವಿಚಾರಣೆಗಾಗಿ ಕರೆತಂದಿದ್ದಾರೆ. ಸೋನಂ ಬಂಧನಕ್ಕೂ ಮುನ್ನ ಸ್ವಲ್ಪ ಸಮಯದವರೆಗೆ ತನ್ನ ಪತಿಯೊಂದಿಗೆ ಅವರ ಫ್ಲಾಟ್‌ನಲ್ಲಿ ಇದ್ದರು. ಇದೇ ಸಂದರ್ಭದಲ್ಲಿ ಸೋನಂ ಅವರ ಬ್ಯಾಗ್‌ನಲ್ಲಿ ಪೊಲೀಸರು ದೇಶೀಯ ನಿರ್ಮಿತ ಪಿಸ್ತೂಲ್, ಫೋನ್, ರಾಜಾ ರಘುವಂಶಿಗೆ ಸೇರಿದ ಆಭರಣಗಳು ಮತ್ತು ಐದು ಲಕ್ಷ ರೂ. ನಗದು ಪತ್ತೆಯಾಗಿದೆ. ತನಿಖೆಯಲ್ಲಿ ಇವು ನಿರ್ಣಾಯಕವಾದವು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಮಧ್ಯಪ್ರದೇಶದ ಇಂದೋರ್‌ ಮೂಲದ ರಾಜಾ ರಘುವಂಶಿ ಮತ್ತು ಸೋನಂ ಮೇ 11 ರಂದು ವಿವಾಹವಾದರು. ಅದೇ ತಿಂಗಳು 20 ರಂದು ಅವರು ತಮ್ಮ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದರು. ಆರಂಭದಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಯೋಜಿಸಿದ್ದರು. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಿದ್ದರಿಂದ ಮೇಘಾಲಯಕ್ಕೆ ತಮ್ಮ ಪ್ಲಾನ್​ ಬದಲಾಯಿಸಿದರು. ನವದಂಪತಿ ಮೇ 20 ರಂದು ತಮ್ಮ ಹನಿಮೂನ್‌ಗೆ ಮೇಘಾಲಯಕ್ಕೆ ತೆರಳಿದರು. ಮೇ 23 ರಂದು ತಮ್ಮ ವಸತಿಗೃಹದಿಂದ ಸ್ಕೂಟಿಯಲ್ಲಿ ಹೊರಟು ಇದ್ದಕ್ಕಿದ್ದಂತೆ ನಾಪತ್ತೆಯಾದರು. ಸ್ಕೂಟರ್ ಒಂದು ಹಳ್ಳಿಯ ಹೊರವಲಯದಲ್ಲಿ ಪತ್ತೆಯಾಗಿತ್ತು. ಆದಾಗ್ಯೂ, ಅವರು ಕಣ್ಮರೆಯಾದ 11 ದಿನಗಳ ನಂತರ (ಜೂನ್ 2 ರಂದು), ಪೊಲೀಸರು ರಘುವಂಶಿ ಅವರ ಶವವನ್ನು ಸೊಹ್ರಾದಲ್ಲಿನ ಜಲಪಾತದ ಬಳಿಯ ಆಳವಾದ ಕಣಿವೆಯಲ್ಲಿ ಪತ್ತೆ ಮಾಡಿದರು. ಅವರ ದೇಹದ ಮೇಲೆ ಚಾಕುವಿನಿಂದಾದ ಗಾಯಗಳಿದ್ದ ಕಾರಣ, ಪೊಲೀಸರು ಕೊಲೆ ಎಂದು ಶಂಕಿಸಿದರು. ಸೋನಂ ಎಲ್ಲಿದ್ದಾರೆಂದು ಪತ್ತೆಯಾಗದ ಕಾರಣ ಎಲ್ಲರೂ ಭಯಭೀತರಾಗಿದ್ದರು. ಈ ಮಧ್ಯೆ, ವಿಶೇಷ ಪಡೆ ಆಕೆಗಾಗಿ ಕಾಡಿನಲ್ಲಿ ಹುಡುಕಾಟ ನಡೆಸಿತು. ಮತ್ತೊಂದೆಡೆ, ಪೊಲೀಸರು ಪ್ರಕರಣದ ತನಿಖೆಯ ವೇಗವನ್ನು ಹೆಚ್ಚಿಸಿದರು.

ಸೋನಂ ಮತ್ತು ಕುಶ್ವಾಹ ಅವರ ಯೋಜನೆಯಂತೆಯೇ ಎಲ್ಲವೂ ನಡೆಯಿತು. ಆದರೆ, ಕೊಲೆಗೆ ಅವರು ಬಳಸಿದ್ದ ಹರಿತವಾದ ಆಯುಧ ಎಲ್ಲವನ್ನೂ ತಲೆಕೆಳಗು ಮಾಡಿತು. ರಘುವಂಶಿ ಕೊಲೆ ಪ್ರಕರಣದ ತನಿಖೆಯ ಸಮಯದಲ್ಲಿ, ಸೋನಂ ಜೀವಂತವಾಗಿದ್ದಾಳೆ ಎಂಬ ಅನುಮಾನ ಮೂಡಿತು. ಅಲ್ಲದೆ, ಆಕೆಯೇ ಕೊಲೆ ಮಾಡಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿತು. ಸಾಮಾನ್ಯವಾಗಿ, ಮೇಘಾಲಯದಲ್ಲಿ ಅಂತಹ ಆಯುಧವನ್ನು ಬಳಸಲಾಗುವುದಿಲ್ಲ. ಹೀಗಾಗಿ ಹೊರಗಿನವರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು. ಬಳಿಕ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಸೋನಂ, ರಾಜ್ ಕುಶ್ವಾಹ ಜತೆ ನಿಯಮಿತವಾಗಿ ಸಂಪರ್ಕದಲ್ಲಿರುವುದು ತಿಳಿದುಬಂತು. ಸೋನಮ್, ರಾಜಾ ರಘುವಂಶಿ ಅವರ ತಾಯಿಯೊಂದಿಗೆ ಮಾತನಾಡಿದ ಕೊನೆಯ ಮಾತುಗಳು ಸಹ ಪೊಲೀಸರಿಗೆ ಅನುಮಾನ ಉಂಟುಮಾಡಿದವು. ಅಲ್ಲದೆ, ಅವರಿಬ್ಬರೂ ಒಟ್ಟಿಗೆ ಇರುವ ಫೋಟೋಗಳ ಯಾವುದೇ ಸ್ಟೇಟಸ್‌ಗಳನ್ನು ಪೋಸ್ಟ್ ಮಾಡದ ಕಾರಣ ಅನುಮಾನಗಳು ಇನ್ನಷ್ಟು ಬಲಗೊಂಡವು.

ಅಂದಹಾಗೆ, ಸೋನಂ ತನ್ನ ತಂದೆಯ ಕಂಪನಿಯಲ್ಲಿ ಕೆಲಸ ಮಾಡುವ ರಾಜ್ ಕುಶ್ವಾಹನನ್ನು ಪ್ರೀತಿಸುತ್ತಿದ್ದಳು. ಆದರೆ, ಆ ಬಗ್ಗೆ ಹಿರಿಯರಿಗೆ ಹೇಳುವ ಧೈರ್ಯ ಇರಲಿಲ್ಲ. ಆದ್ದರಿಂದ, ಅವಳು ರಾಜಾ ರಘುವಂಶಿಯನ್ನು ಮದುವೆಯಾದಳು. ಬಳಿಕ ತಮ್ಮ ಪ್ರೇಮಕ್ಕೆ ರಘುವಂಶಿ ಅಡ್ಡಿಯಾಗುತ್ತಾನೆಂದು ಭಾವಿಸಿ, ಆತನನ್ನು ಕೊಲ್ಲಲು ಸೋನಂ ಮತ್ತು ಕುಶ್ವಾಹ ಸಂಚು ರೂಪಿಸಿದರು. ಅದನ್ನು ಕಾರ್ಯಗತಗೊಳಿಸಲು, ಸುಪಾರಿ ಹಂತಕರನ್ನು ಏರ್ಪಡಿಸಿದರು. ಸೋನಂ​ ಮೇಘಾಲಯಕ್ಕೆ ಹನಿಮೂನ್​ ಪ್ಲಾನ್​ ಮಾಡಿದಳು. ಆದರೆ, ಕುಶ್ವಾಹ ಮೇಘಾಲಯಕ್ಕೆ ಹೋಗಲಿಲ್ಲ. ಬದಲಾಗಿ ಫೋನ್‌ನಲ್ಲಿ ಸೋನಂ ಜೊತೆ ಸಂಪರ್ಕದಲ್ಲಿದ್ದನು. ಯೋಜನೆಯ ಪ್ರಕಾರ, ಸೋನಂ, ರಾಜಾ ರಘುವಂಶಿಯನ್ನು ಚಿರಾಪುಂಜಿಯ ಸಂಚಾರವಿಲ್ಲದ ರಸ್ತೆಗೆ ಕರೆದೊಯ್ದಳು. ಅಲ್ಲಿ, ಸುಪಾರಿ ಹಂತಕರು ಆತನನ್ನು ಕೊಂದರು. ನಂತರ, ಸೋನಂ ಸೇರಿದಂತೆ ಮೂವರು ಆರೋಪಿಗಳು ಅಸ್ಸಾಂನ ಗುವಾಹಟಿಗೆ ಹೋಗಿ, ಅಲ್ಲಿಂದ ಬೇರೆ ಬೇರೆಯಾದರು. ಈ ನಡುವೆ ಸೋನಂ, ಪೊಲೀಸರಿಗೆ ರಘುವಂಶಿಯನ್ನು ತಾನು ಕೊಂದಿಲ್ಲ, ಬದಲಿಗೆ ಯಾರೋ ಅವರನ್ನು ಅಪಹರಿಸಿದ್ದಾರೆ ಎಂದು ಹೇಳಿದಳು. ಆದರೆ, ತನಿಖೆಯಲ್ಲಿ ಆಕೆಯ ಕಳ್ಳಾಟ ಎಲ್ಲವು ಬಯಲಾಯಿತು. ಕೊನೆಗೂ ಸೋನಂ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಳು.

ಮತ್ತೊಂದೆಡೆ, ಈ ಪ್ರಕರಣದಲ್ಲಿ ಇಂದೋರ್‌ನ ವಿಶಾಲ್ ಸಿಂಗ್ ಚೌಹಾಣ್ (22), ಉತ್ತರ ಪ್ರದೇಶದ ಲಲಿತಪುರದ ರಾಜ್ ಸಿಂಗ್ ಕುಶ್ವಾಹ (21) ಮತ್ತು ಆಕಾಶ್ ರಜಪೂತ್ (19) ಎಂಬುವರನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net