

IND vs ENG : ಕಳಪೆ ಫೀಲ್ಡಿಂಗ್ ಮತ್ತು ಕೊನೇ ದಿನದ ನೀರಸ ಬೌಲಿಂಗ್ ದಾಳಿಯಿಂದಾಗಿ, ಭಾರತ ತಂಡ ಮೊದಲ 4 ದಿನಗಳಲ್ಲಿ ಪ್ರದರ್ಶಿಸಿದ್ದ ಅಮೋಘ ಬ್ಯಾಟಿಂಗ್ ನಿರ್ವಹಣೆ ವ್ಯರ್ಥಗೊಂಡಿದೆ. ಅತಿಥೇಯ ಇಂಗ್ಲೆಂಡ್ಗೆ ಬೃಹತ್ ಗುರಿ ನೀಡಿದರೂ, ಅದನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾದ ಭಾರತ ತಂಡ ಅಂಡರ್‌ಸನ್-ತೆಂಡುಲ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಪರಾಭವಗೊಂಡಿದೆ.
ಇಂಗ್ಲೆಂಡ್ ಆರಂಭಿಕ ಬೆನ್ ಡಕೆಟ್ (149 ರನ್, 170 ಎಸೆತ 21 ಬೌಂಡರಿ, 1 ಸಿಕ್ಸರ್) ಭರ್ಜರಿ ಶತಕದ ಹೋರಾಟ ಭಾರತದ ಗೆಲುವು ಕಸಿಯಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 0-1 ಹಿನ್ನಡೆ ಕಂಡಿದೆ. ಇದರಿಂದ ಶುಭಮಾನ್ ಗಿಲ್ ನಾಯಕತ್ವದ ಮೊದಲ ಪಂದ್ಯದಲ್ಲಿ ಭಾರತ ನಿರಾಸೆ ಅನುಭವಿಸಿದಂತಾಗಿದೆ.
ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಟೀಮ್ ಇಂಡಿಯಾ ಕೈಚೆಲ್ಲಿತು. ಇದಕ್ಕೆ ಪ್ರಮುಖ ಕಾರಣ ಏನೆಂದರೆ, ಫೀಲ್ಡಿಂಗ್ ವೈಫಲ್ಯ. ಈ ಪಂದ್ಯದಲ್ಲಿ ಭಾರತೀಯ ಫೀಲ್ಡರ್‌ಗಳು ಒಟ್ಟು 6 ಕ್ಯಾಚ್‌ಗಳನ್ನು ಕೈಬಿಟ್ಟರು. ಇದೇ ಇಂಗ್ಲೆಂಡ್ ತಂಡಕ್ಕೆ ವರವಾಯಿತು.
ಕೊನೆಯ ದಿನದಾಟದಲ್ಲೂ ಟೀಮ್ ಇಂಡಿಯಾದ ಫೀಲ್ಡಿಂಗ್ ಸ್ವಲ್ಪವೂ ಸುಧಾರಿಸಲಿಲ್ಲ. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬೆನ್ ಡಕೆಟ್ 97 ರನ್ ಗಳಿಸಿದ್ದಾಗ ಸಿರಾಜ್ ಬೌಲಿಂಗ್ನಲ್ಲಿ ಶಾಟ್ ಆಡಲು ಹೋಗಿ ಕ್ಯಾಚ್ ನೀಡಿದರು. ಆದರೆ, ಯಶಸ್ವಿ ಜೈಸ್ವಾಲ್ ಆ ಕ್ಯಾಚ್ ಅನ್ನು ಕೈಚೆಲ್ಲಿದರು. ಒಂದು ಜೀವದಾನ ಪಡೆದ ಡಕೆಟ್ 149 ರನ್ ಗಳಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ಸರಣಿಯಲ್ಲಿ ಟೀಮ್ ಇಂಡಿಯಾದ ಕಳಪೆ ಫೀಲ್ಡಿಂಗ್ ಪ್ರದರ್ಶನಕ್ಕಾಗಿ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಟ್ರೋಲ್ ಮಾಡಿದ್ದಾರೆ. ನಾನು ಈ ಭಾರತೀಯ ತಂಡಕ್ಕೆ ಫೀಲ್ಡಿಂಗ್ ಕೋಚ್ ಎಂದು ಘೋಷಿಸುತ್ತಿದ್ದೇನೆ. ನನ್ನ ಫೀಲ್ಡಿಂಗ್ ಅಕಾಡೆಮಿ ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೈಕಲ್ ವಾನ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಮೈಕಲ್ ವಾನ್ ಮಾಡಿರುವ ಟ್ವೀಟ್ ಅನ್ನು ವಿರೋಧಿಸುತ್ತಿರುವ ಭಾರತೀಯ ಅಭಿಮಾನಿಗಳು, ಈ ಹಿಂದೆ ಮೈಕಲ್ ವಾನ್ ಕ್ಯಾಚ್ ಬಿಟ್ಟಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಾಲೆಳೆಯುತ್ತಿದ್ದಾರೆ. ಈ ಹಿಂದೆ, ಮೈಕಲ್ ವಾನ್ ತಮ್ಮದೇ ತಂಡವನ್ನು ಇದೇ ರೀತಿ ಟ್ರೋಲ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ಮೈಕಲ್ ವಾನ್ ಕ್ರಿಕೆಟ್ ಸಂಬಂಧ ಏನಾದರೂ ಒಂದು ಟ್ವೀಟ್ ಮಾಡುತ್ತಲೇ ಇರುತ್ತಾರೆ.
ಅಂದಹಾಗೆ, ಇಂಗ್ಲೆಂಡ್ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಂದಿನ ಬುಧವಾರದಿಂದ ಆರಂಭವಾಗಲಿದೆ. (ಏಜೆನ್ಸೀಸ್)