

Shubman Gill : ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಭಾಗವಾಗಿ ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನ್ನು ಅನುಭವಿಸಿದೆ. ಭಾರತ ನೀಡಿದ್ದ 371 ರನ್‌ಗಳ ಗುರಿಯನ್ನು ಆಂಗ್ಲ ಪಡೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಬೆನ್ನಟ್ಟಿತು. ಇದರೊಂದಿಗೆ, ಈ ಸರಣಿಯಲ್ಲಿ 0-1 ರಿಂದ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ಶುಭಮಾನ್ ಗಿಲ್ ಮಾತನಾಡಿ ತಮ್ಮ ಸೋಲಿಗೆ ಕಾರಣಗಳನ್ನು ಬಹಿರಂಗಪಡಿಸಿದರು.
ಇದೊಂದು ಉತ್ತಮ ಟೆಸ್ಟ್ ಪಂದ್ಯವಾಗಿತ್ತು. ಈ ಪಂದ್ಯವನ್ನು ಗೆಲ್ಲುವ ಅವಕಾಶ ನಮಗಿತ್ತು. ಆದರೆ, ನಾವು ಕ್ಯಾಚ್‌ಗಳನ್ನು ಕೈಬಿಟ್ಟೆವು. ಇದಲ್ಲದೆ, ಕೆಳ ಕ್ರಮಾಂಕದಲ್ಲಿಯೂ ನಮಗೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಸುಮಾರು 430 ರನ್ ಗಳಿಸಿದ ಬಳಿಕ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಳ್ಳಲು ಬಯಸಿದ್ದೆವು. ಆದರೆ, ಕೆಳ ಕ್ರಮಾಂಕದಲ್ಲಿ ನಮಗೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಮುಂಬರುವ ಪಂದ್ಯಗಳಲ್ಲಿ ಈ ಸಮಸ್ಯೆಯನ್ನು ನಿವಾರಿಸುವತ್ತ ಗಮನ ಹರಿಸುತ್ತೇವೆ ಎಂದಿದ್ದಾರೆ.
ಈ ಟೆಸ್ಟ್ನಲ್ಲಿ ನಾವು ಹಲವಾರು ಬಾರಿ ಕ್ಯಾಚ್‌ಗಳನ್ನು ಕೈಬಿಟ್ಟೆವು. ನಮ್ಮ ತಂಡದ ಸೋಲಿಗೆ ಅದೂ ಒಂದು ಕಾರಣ. ನಮ್ಮದು ಯುವ ತಂಡವಾಗಿದ್ದು, ನಾವು ಕಲಿಯುತ್ತಿದ್ದೇವೆ. ಮುಂದಿನ ಪಂದ್ಯಗಳಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಭಾವಿಸುತ್ತೇನೆ ಎಂದು ಶುಭಮಾನ್ ಗಿಲ್ ಹೇಳಿದರು. ಎರಡನೇ ಟೆಸ್ಟ್ಗೆ ಜಸ್ಪ್ರೀತ್ ಬುಮ್ರಾ ಲಭ್ಯರಿರುತ್ತಾರೆಯೇ ಎಂದು ಇದೇ ಸಂದರ್ಭದಲ್ಲಿ ಕೇಳಿದಾಗ, ನಾವು ಪಂದ್ಯದಿಂದ ಪಂದ್ಯವನ್ನು ನೋಡುತ್ತೇವೆ. ಎರಡನೇ ಟೆಸ್ಟ್ಗೆ ಇನ್ನೂ ಸಮಯವಿದೆ. ಆ ಸಮಯದಲ್ಲಿ ನಾವು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಕಳಪೆ ಫೀಲ್ಡಿಂಗ್ ಮತ್ತು ಕೊನೇ ದಿನದ ನೀರಸ ಬೌಲಿಂಗ್ ದಾಳಿಯಿಂದಾಗಿ, ಭಾರತ ತಂಡ ಮೊದಲ 4 ದಿನಗಳಲ್ಲಿ ಪ್ರದರ್ಶಿಸಿದ್ದ ಅಮೋಘ ಬ್ಯಾಟಿಂಗ್ ನಿರ್ವಹಣೆ ವ್ಯರ್ಥಗೊಂಡಿದೆ. ಅತಿಥೇಯ ಇಂಗ್ಲೆಂಡ್ಗೆ ಬೃಹತ್ ಗುರಿ ನೀಡಿದರೂ, ಅದನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾದ ಭಾರತ ತಂಡ ಅಂಡರ್‌ಸನ್-ತೆಂಡುಲ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಪರಾಭವಗೊಂಡಿದೆ. ಇಂಗ್ಲೆಂಡ್ ಆರಂಭಿಕ ಬೆನ್ ಡಕೆಟ್ (149 ರನ್, 170 ಎಸೆತ 21 ಬೌಂಡರಿ, 1 ಸಿಕ್ಸರ್) ಭರ್ಜರಿ ಶತಕದ ಹೋರಾಟ ಭಾರತದ ಗೆಲುವು ಕಸಿಯಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 0-1 ಹಿನ್ನಡೆ ಕಂಡಿದೆ. ಇದರಿಂದ ಶುಭಮಾನ್ ಗಿಲ್ ನಾಯಕತ್ವದ ಮೊದಲ ಪಂದ್ಯದಲ್ಲಿ ಭಾರತ ನಿರಾಸೆ ಅನುಭವಿಸಿದಂತಾಗಿದೆ.
ಹೆಡಿಂಗ್ಗೆ ಮೈದಾನದಲ್ಲಿ ಮಂಗಳವಾದ ಮುಕ್ತಾಯಗೊಂಡ ಪಂದ್ಯದಲ್ಲಿ, ಭಾರತ ನೀಡಿದ್ದ 371 ರನ್ ಸವಾಲಿಗೆ ಪ್ರತಿಯಾಗಿ ವಿಕೆಟ್ ನಷ್ಟವಿಲ್ಲದೆ 21 ರನ್‌ಗಳಿಂದ 5ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಇಂಗ್ಲೆಂಡ್ ಆರಂಭಿಕರಾದ ಡಕೆಟ್-ಜಾಕ್ ಕ್ರೌಲಿ (65 ರನ್, 126 ಎಸೆತ, 7 ಬೌಂಡರಿ) ದಿಟ್ಟ ಜತೆಯಾಟದ ನೆರವಿನಿಂದ ಗೆಲುವಿನತ್ತ ಮುನ್ನಡೆಯಿತು. ಆಗ ತ್ವರಿತಗತಿಯಲ್ಲಿ 4 ವಿಕೆಟ್ ಕಬಳಿಸಿದ ಭಾರತ ಪಂದ್ಯದ ಕುತೂಹಲ ಹೆಚ್ಚಿಸಿತು. ಅಂತಿಮವಾಗಿ ಇಂಗ್ಲೆಂಡ್ 82 ಓವರ್‌ಗಳಲ್ಲಿ 5 ವಿಕೆಟ್ 373 ರನ್ ಗಳಿಸಿ ಜಯ ಸಾಧಿಸಿತು. ಜೋ ರೂಟ್ (53 ರನ್, 84 ಎಸೆತ, 6 ಬೌಂಡರಿ) ಮತ್ತು ಜೇಮಿ ಸ್ಮಿತ್ (44*) ಮುರಿಯದ 6ನೇ ವಿಕೆಟ್‌ಗೆ 82 ಎಸೆತಗಳಲ್ಲಿ 53 ರನ್ ಜತೆಯಾಟವಾಡಿ ಗೆಲುವಿನ ದಡ ಸೇರಿಸಿದರು. ಪದೇಪದೇ ಮಳೆ ಕಾಡಿದ್ದರಿಂದ ಡ್ರಾ ಲಕ್ಷಣವೂ ಕಾಣಿಸಿದ್ದರಿಂದ ಮೂರೂ ಫಲಿತಾಂಶಗಳ ಸಾಧ್ಯತೆಯಿಂದ ಕೂಡಿದ ಕೊನೇ ಅವಧಿಯ ಆಟ ತೀವ ರೋಚಕತೆ ಸೃಷ್ಟಿಸಿತು. (ಏಜೆನ್ಸೀಸ್)