

ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಂಪೈರ್ ಹೋಟೆಲ್ನಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದೆ. ನಗರದ ಚರ್ಚ್ ಸ್ಟ್ರೀಟ್ನಲ್ಲಿರುವ ಈ ಹೋಟೆಲ್ನ ಲಾಡ್ಜ್ ರೂಮ್ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮಧ್ಯಾಹ್ನ 1.30ರ ಸುಮಾರಿಗೆ ಈ ಪ್ರಕರಣ ಸಂಭವಿಸಿದೆ.
ಎಂಪೈರ್ ಹೋಟೆಲ್ನ ಲಾಡ್ಜ್ ಕೋಣೆಯ ಗಾಜು ಒಡೆದುಹೋಗಿ ಹೊಗೆ ಹೊರಗೆ ಕಾಣಿಸಿಕೊಂಡಾಗ ಬೆಂಕಿ ಹೊತ್ತಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಇದೇ ಹೋಟೆಲ್ನಲ್ಲಿ ಪುನೀತ್ ಫುಡ್ ಫೆಸ್ಟಿವಲ್ ಕೂಡ ನಡೆಯುತ್ತಿದ್ದು, ಅದಕ್ಕೆ ಬಂದಿದ್ದ ಗ್ರಾಹಕರೂ ಇದ್ದರು.
ಒಟ್ಟು 32 ರೂಮ್ಗಳನ್ನು ಹೊಂದಿರುವ ಎಂಪೈರ್ ಹೋಟೆಲ್ನಲ್ಲಿ ಬೆಂಕಿ ಕಾಣಿಸಿಕೊಂಡ ವೇಳೆ 20 ರೂಮ್ಗಳಲ್ಲಿ ಅತಿಥಿಗಳಿದ್ದು, 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು. ರೂಮ್ ನಂ. 205ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಎಲ್ಲರನ್ನೂ ಹೊರಗೆ ಕಳುಹಿಸಲಾಗಿದೆ.
ರೂಮ್ನಲ್ಲಿದ್ದ ಟಿವಿ ಬ್ಲಾಸ್ಟ್ ಆಗಿ ಬೆಂಕಿ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿರುವ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸದ್ಯಕ್ಕೆ ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ.