

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯ ಆವರಣದಲ್ಲಿ ಇಂದು ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದ ಪ್ರಕರಣದ ಕುರಿತು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಅದನ್ನು ಆಕಸ್ಮಿಕವಲ್ಲ ಷಡ್ಯಂತ್ರ ಎಂದು ಆರೋಪ ಮಾಡಿದೆ.
ಬಿಬಿಎಂಪಿ ಕಚೇರಿಯ ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಕಾಮಗಾರಿಗಳ ದಾಖಲೆ ಇದ್ದಂತಹ ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಷಡ್ಯಂತ್ರ. ಶೇ. 40% ಕಮಿಷನ್ನ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ದಾಖಲೆಗಳಿದ್ದ ಕೊಠಡಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳನ್ನು, ಇದರ ಹಿಂದಿರುವ ಬಿಜೆಪಿಯ ಭ್ರಷ್ಟರನ್ನು ಹೆಡೆಮುರಿ ಕಟ್ಟುವುದು ನಿಶ್ಚಿತ ಎಂದು ಕರ್ನಾಟಕ ಕಾಂಗ್ರೆಸ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಿಂದ ಆರೋಪ ಮಾಡಲಾಗಿದೆ. ಬಿಜೆಪಿ ತಾನು ಮಾಡಿದ ಭ್ರಷ್ಟಾಚಾರದ ಸಾಕ್ಷ್ಯಗಳಿಗೆ ಬೆಂಕಿ ಇಟ್ಟು ಬಚಾವಾಗಿಬಿಡುವ ಹುನ್ನಾರ ನಡೆಸಿದೆ ಎಂದೂ ಆರೋಪಿಸಲಾಗಿದೆ.
ಬಿಬಿಎಂಪಿ ಕಚೇರಿಯ ಪ್ರಯೋಗಾಲಯದಲ್ಲಿ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ಪಾಲಿಕೆಯ ಏಳು ಜನ ಇಂಜಿನಿಯರ್ಗಳಿಗೆ ಬೆಂಕಿ ತಗುಲಿದ್ದು, ಗಂಭೀರ ಗಾಯಗಳಾಗಿವೆ. ಈ ಪೈಕಿ ಐವರು ಪುರುಷರು ಮತ್ತು ಇಬ್ಬರು ಮಹಿಳೆಯರು. ಗಾಯಗೊಂಡಿರುವ ನೌಕರರಿಗೆ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.