

ನವದೆಹಲಿ: ಮದುವೆಯೊಂದರ ಫೋಟೋಗ್ರಫಿಗೆ ಹೋಗಿದ್ದ ಫೋಟೋಗ್ರಾಫರ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆತನಿಗೆ ಆರ್ಡರ್ ಕೊಟ್ಟಿದ್ದ ವಧು ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆಲ್ಲ ಮೂಲಕಾರಣವಾಗಿರುವ ಸಂಗತಿಯೊಂದು ಹೊರಬಿದ್ದಿದ್ದು, ವಿಷಯ ಇದೀಗ ಜಗಜ್ಜಾಹೀರಾಗಿದೆ.
ಈ ವಿಚಿತ್ರ ಪ್ರಸಂಗದ ಕುರಿತು ಫೋಟೋಗ್ರಾಫರ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಪರಿಹಾರ ಕೇಳಿದ್ದಾನೆ. ಈ ಫೋಟೋಗ್ರಾಫರ್ ಇತ್ತೀಚೆಗೆ ಮದುವೆಯೊಂದಕ್ಕೆ ಹೋಗಿದ್ದ. ಅದಕ್ಕಾಗಿ ಸಹಾಯಕನಾಗಿ ಬರುತ್ತಿದ್ದವ ಅಂದು ಲಭ್ಯವಿರದ್ದರಿಂದ ಆನ್ಲೈನ್ನಲ್ಲಿ ಹುಡುಕಾಡಿದ್ದ. ಆಗ ಒಬ್ಬಳು ಲೇಡಿ ಫೋಟೋಗ್ರಾಫರ್ ಲಭಿಸಿದ್ದು, ಆಕೆಯನ್ನು ಸಹಾಯಕಿ ಆಗಿ ಕರೆದುಕೊಂಡು ಮದುವೆಗೆ ಹೋಗಿದ್ದ.
ಮದುವೆ ಫೋಟೋಗ್ರಫಿ ಎಲ್ಲ ಮುಗಿದು ಅದಕ್ಕಾಗಿ ಹಣವೂ ಪಾವತಿ ಆಗಿದ್ದೆಲ್ಲವೂ ಮುಗಿದ ಮೇಲೆ ಫೋಟೋಗ್ರಾಫರ್ಗೆ ಬಂದಿರುವ ಇ-ಮೇಲ್ ಆತನನ್ನು ಚಿಂತೆಗೀಡುಮಾಡಿದೆ. ಅದು ಆತ ಹೋಗಿದ್ದ ಮದುವೆಯ ವಧು ಕಳಿಸಿದ್ದ ಇ-ಮೇಲ್. ನಿಮ್ಮೊಂದಿಗೆ ಬಂದಿದ್ದ ಸಹಾಯಕಿ ನನ್ನ ಪತಿ ಜತೆ ಅಫೇರ್ ಹೊಂದಿದ್ದು, ಫೋಟೋಗ್ರಫಿಗೆ ನೀಡಿದ್ದ ಹಣ ಹಿಂದಿರುಗಿಸಿ ಎಂದು ಆಕೆ ಒತ್ತಾಯಿಸಿ ಇ-ಮೇಲ್ ಕಳಿಸಿದ್ದಳು.
ನಾನು ಅಂದು ನನ್ನ ಸಹಾಯಕ ಇರದ್ದರಿಂದ ಆನ್ಲೈನ್ನಲ್ಲಿ ಸಿಕ್ಕ ಲೇಡಿ ಫೋಟೋಗ್ರಾಫರ್ನ ಸಹಾಯಕಿ ಆಗಿ ಕರೆದುಕೊಂಡು ಹೋಗಿದ್ದೆ. ಆದರೆ ಆಕೆ ಮದುವೆ ಬಳಿಕ ವರನೊಂದಿಗೆ ಅಫೇರ್ ಹೊಂದಿ ಜತೆಗೇ ಮಲಗಿದ್ದ ವಿಷಯ ವಧುವಿನಿಂದಾಗಿ ಬೆಳಕಿಗೆ ಬಂದಿದೆ. ಆಕೆ ಅದಕ್ಕೆ ಸಂಬಂಧಿತ ಫೋಟೋ ಕೂಡ ಕಳಿಸಿಕೊಟ್ಟಿದ್ದಾಳೆ. ವಧು ಬಗ್ಗೆ ಬೇಸರವಾಗುತ್ತಿದೆಯಾದರೂ ನಾನೀಗ ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಫೋಟೋಗ್ರಾಫರ್ ರೆಡ್ಡಿಟ್ನಲ್ಲಿ ಹೇಳಿಕೊಂಡಿದ್ದಾನೆ. -ಏಜೆನ್ಸೀಸ್