ಎರಡು ಗಂಟೆಗಳ ಮಾತಿನಲ್ಲಿ ಮಣಿಪುರದ ಬಗ್ಗೆ ಇದ್ದಿದ್ದು ಎರಡೇ ನಿಮಿಷ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

Modi Gandhi
Published on

ನವದೆಹಲಿ: ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಆಡಿದ್ದ ಸುಮಾರು 2 ಗಂಟೆಗಳ ಅವಧಿಯ ಮಾತಿನಲ್ಲಿ ಮಣಿಪುರದ ಬಗ್ಗೆ ಇದ್ದಿದ್ದು ಬರೀ ಎರಡೇ ನಿಮಿಷ ಎಂದು ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಇಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಮಣಿಪುರ ಹೊತ್ತಿ ಉರಿಯಲಿ ಎಂದು ಬಯಸುತ್ತಿದ್ದಾರೆ ಮತ್ತು ಅದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ನಿಜಕ್ಕೂ ಅವರಿಗೆ ಮಣಿಪುರದಲ್ಲಿನ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರಬೇಕು ಎಂಬ ಮನಸಿದ್ದರೆ ಅದನ್ನು ತಕ್ಷಣವೇ ತಹಬದಿಗೆ ತರಬಲ್ಲ ಸಾಧನಗಳು ಸರ್ಕಾರದ ಕೈಯಲ್ಲೇ ಇವೆ ಎಂದು ರಾಹುಲ್ ಕಿಡಿಕಾರಿದ್ದಾರೆ.

ಮಣಿಪುರದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಾಯುತ್ತಿದ್ದಾರೆ. ಮಹಿಳೆಯರ ಮೇಲೆ ಹಿಂಸಾಚಾರ, ಅತ್ಯಾಚಾರಗಳು ನಡೆಯುತ್ತಿವೆ. ಆದರೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಕುಳಿತು ನಗುತ್ತಿದ್ದಾರೆ. ಒಂದು ರಾಜ್ಯವೇ ಕಳೆದ ನಾಲ್ಕು ತಿಂಗಳಿಂದ ಹೊತ್ತಿ ಉರಿಯುತ್ತಿರುವಾಗ ಸಂಸತ್ತಿನಲ್ಲಿ ತಮಾಷೆ ಮಾಡಿ ನಗುವುದು ಪ್ರಧಾನಿಗೆ ಯೋಗ್ಯವಲ್ಲ ಎಂದು ರಾಹುಲ್ ಹೇಳಿದ್ದಾರೆ.

ನಿನ್ನೆ ಪ್ರಧಾನಿ ಸಂಸತ್ತಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿದ್ದನ್ನು ನೋಡಿದೆ. ಆ ಮಾತಿನಲ್ಲಿ ನಗು ತಮಾಷೆ ಸ್ಲೋಗನ್​ಗಳು ತುಂಬಿದ್ದವು. ಪ್ರಧಾನಿ ಒಂದು ಸ್ಲೋಗನ್ ಹೇಳುವುದು, ಬಿಜೆಪಿ ನಾಯಕರು ಅದಕ್ಕೆ ಇನ್ನೊಂದು ಸ್ಲೋಗನ್ ಮೂಲಕ ಜೈಕಾರ ಕೂಗುವುದು. ಪ್ರಧಾನಿ ಮಣಿಪುರದ ಸ್ಥಿತಿ ಮರೆತಂತಿತ್ತು, ಅಷ್ಟೂ ಮಾತಿನಲ್ಲಿ ಮಣಿಪುರದ ಬಗ್ಗೆ ಇದ್ದಿದ್ದು ಎರಡೇ ನಿಮಿಷ ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net