ರಾಜೀಸಂಧಾನದ ವೇಳೆಯೇ ನಡೆಯಿತು ಎರಡು ಗುಂಪುಗಳ ನಡುವೆ ಭಾರಿ ಮಾರಾಮಾರಿ: ಹೋಯಿತು ಸಂಧಾನಕ್ಕೆ ಬಂದ ಇಬ್ಬರ ಜೀವ...

Murder
Published on

ಬೆಂಗಳೂರು: ಸುಬ್ರಹ್ಮಣ್ಯಪುರದಲ್ಲಿ ಭಾನುವಾರ ರಾಜೀ ಮಾಡಿಕೊಳ್ಳಲು ಬಂದ ರೌಡಿಗಳ ಎರಡು ತಂಡ ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ರೌಡಿ ಸೇರಿ ಇಬ್ಬರು ಕೊಲೆಯಾಗಿದ್ದಾರೆ. ಸುಬ್ರಹ್ಮಣ್ಯಪುರದ ನಿವಾಸಿ ಮುಕುಂದ ಅಲಿಯಾಸ್ ಕರಿಹಂದಿ (30) ಹಾಗೂ ಬೈರಸಂದ್ರ ಮನೋಜ್ (26) ಕೊಲೆಯಾದವರು.

ಹನುಮಂತನಗರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಮುಕುಂದ ಮತ್ತು ಶ್ರೀನಗರದ ರಜ್ಜು ನಡುವೆ 4 ವರ್ಷಗಳಿಂದ ಜಗಳ ನಡೆಯುತ್ತಿತ್ತು. ಕಳೆದ ಎರಡೂವರೆ ವರ್ಷಗಳ ಹಿಂದೆ ರಜ್ಜು ಮೇಲೆ ಮುಕುಂದ ಹಲ್ಲೆ ನಡೆಸಿದ್ದ. ಇದರಲ್ಲಿ ಕೂದಲೆಳೆ ಅಂತರದಲ್ಲಿ ರಜ್ಜು ಪ್ರಾಣಾಪಾಯದಿಂದ ಪಾರಾಗಿದ್ದ. ಅಂದಿನಿಂದ ಮುಕುಂದನನ್ನು ಕೊಲೆ ಮಾಡಲು ರಜ್ಜು ಸಂಚು ರೂಪಿಸುತ್ತಿದ್ದ. ಆದರೆ, ಮುಕುಂದ ಕೈಗೆ ಸಿಕ್ಕಿರಲಿಲ್ಲ. ಈ ಹಿಂದೆ ಮುಕುಂದನ ನಾಲ್ಕೈದು ಜನ ಸಹಚರರ ಮೇಲೆ ರಜ್ಜು ಹಲ್ಲೆ ನಡೆಸಿದ್ದ. ಅದರ ಪರಿಣಾಮ ಎರಡೂ ತಂಡದವರು ಆಗಾಗ ಪರಸ್ಪರ ಹಲ್ಲೆ ನಡೆಸಿ ದ್ವೇಷ ಮುಂದುವರಿಸಿದ್ದರು. ರಜ್ಜು ಶಿಷ್ಯ ಮನೋಜ್ ಎರಡೂ ತಂಡಗಳ ನಡುವೆ ರಾಜೀ ಮಾಡಲು ಮುಂದಾಗಿದ್ದ. ರಾಜೀ ಮಾಡಿಕೊಳ್ಳಲು ಎರಡೂ ಗ್ಯಾಂಗ್ ನಡುವೆ ಭಾನುವಾರ ಸಮಯ ನಿಗದಿಯಾಗಿತ್ತು.

ರಾಜೀಗೆ ಬಂದವರು ಮಾರಾಮಾರಿಗಿಳಿದರು: ರಾಜೀ ಸಂಧಾನಕ್ಕಾಗಿ ಮುಕುಂದ ಹಾಗೂ ರಜ್ಜು ಗ್ಯಾಂಗ್​ನ ಸದಸ್ಯರು ಭಾನುವಾರ (ಏ.12) ರಾತ್ರಿ 9 ಗಂಟೆಗೆ ಸುಬ್ರಹ್ಮಣ್ಯಪುರದ ನಾಗಪ್ಪಲೇಔಟ್​ಗೆ ಬಂದಿದ್ದರು.

ಸಾಮಾನ್ಯವಾಗಿ ರೌಡಿ ಗ್ಯಾಂಗ್​ಗಳು ರಾಜೀ ಸಂಧಾನಕ್ಕೆ ಕರೆದು ದಾಳಿ ನಡೆಸುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಎರಡೂ ಗ್ಯಾಂಗ್​ಗಳ ಸದಸ್ಯರು ಪರಸ್ಪರ ಅನುಮಾನದಿಂದ ಮಾರಕಾಸ್ತ್ರದೊಂದಿಗೆ ಹಾಜರಾಗಿದ್ದರು. ಮಾರಕಾಸ್ತ್ರ ಕಂಡು ಎರಡೂ ತಂಡದ ಸದಸ್ಯರೂ ಪರಸ್ಪರ ಮಾರಕಾಸ್ತ್ರದಿಂದ ಹೊಡೆದಾಡಿಕೊಂಡಿದ್ದು, ಮುಕುಂದ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮನೋಜ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಹೊಡೆದಾಟದಲ್ಲಿ ಎರಡೂ ತಂಡದ ಸದಸ್ಯರಿಗೂ ಗಾಯಗಳಾಗಿವೆ ಎನ್ನಲಾಗಿದೆ. ಸುಬ್ರಹ್ಮಣ್ಯಪುರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಕೊಲೆ ಮಾಡಿದ ದುಷ್ಕರ್ವಿುಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net