ಗ್ಯಾಸ್ ಏಜೆನ್ಸಿಗಳ ಹಗಲು ದರೋಡೆಗೆ ಬೆಚ್ಚಿಬಿದ್ದ ಗ್ರಾಹಕರು- ಡೆಲಿವರಿ ವೆಚ್ಚದ ನೆಪದಲ್ಲೂ ವಸೂಲಿ!

cylinder
Published on

ಬೆಂಗಳೂರು: ಖಾಸಗಿ ಗ್ಯಾಸ್ ಏಜೆನ್ಸಿಗಳು ರೀಫಿಲ್ಲಿಂಗ್ ಸಿಲಿಂಡರ್​ಗೆ ಗ್ರಾಹಕರಿಗೆ ದುಪ್ಪಟ್ಟು ದರ ವಿಧಿಸುತ್ತಿದ್ದರೆ, ಸರ್ಕಾರಿ ಸ್ವಾಮ್ಯದ ಗ್ಯಾಸ್ ಏಜೆನ್ಸಿಗಳು ಸಿಲಿಂಡರ್ ಸಾಗಣೆ (ಡೋರ್ ಡೆಲಿವರಿ) ಶುಲ್ಕ ಹೆಸರಿನಲ್ಲಿ ಹೆಚ್ಚಿನ ಹಣ ವಸೂಲಿಗೆ ಇಳಿದಿವೆ.

ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಗ್ಯಾಸ್ ಸಂಪರ್ಕ ಇಲ್ಲದವರು ಖಾಸಗಿ ಗ್ಯಾಸ್ ಏಜೆನ್ಸಿಗಳ ಮೊರೆ ಹೋಗಿದ್ದಾರೆ. ಸಾಮಾನ್ಯವಾಗಿ 5 ಕೆ.ಜಿ. ಸಿಲಿಂಡರ್​ಗೆ ಗ್ಯಾಸ್ ತುಂಬಿಸಲು 380 ರೂ. ಹಾಗೂ 14.2 ಕೆ.ಜಿ. ಸಿಲಿಂಡರ್​ಗೆ ಒಂದು ಸಾವಿರ ರೂ.ನಿಂದ 1,200 ರೂ.ಶುಲ್ಕವಿದೆ. ಆದರೆ, ಖಾಸಗಿ ಗ್ಯಾಸ್ ಸಂಸ್ಥೆಗಳು 5 ಕೆ.ಜಿ. ಸಿಲಿಂಡರ್​ಗೆ ಒಂದು ಸಾವಿರ ರೂ ಹಾಗೂ 14.2 ಕೆ.ಜಿ. ಸಿಲಿಂಡರ್​ಗೆ ಗ್ಯಾಸ್​ಗೆ ತುಂಬಿಸಲು ಬರೋಬ್ಬರಿ 3 ಸಾವಿರ ರೂ.ವಿಧಿಸುತ್ತಿದ್ದಾರೆ. ಬೇರೆ ದಾರಿ ಇಲ್ಲದೆ ಮೂರು ಪಟ್ಟು ಹಣ ಕೊಟ್ಟು ಗ್ಯಾಸ್ ಪಡೆಯುತ್ತಿದ್ದೇವೆ. ಇದನ್ನು ಪ್ರಶ್ನಿಸಿದರೆ ‘ಬೇಕಾದರೆ ಪಡೆಯಿರಿ ಇಲ್ಲದಿದ್ದರೆ ಬಿಡಿ’ ಎಂದು ಅಂಗಡಿಯವರು ದಬಾಯಿಸುತ್ತಾರೆ ಎಂದು ಸಿದ್ಧಾಪುರ ನಿವಾಸಿ ನವೀನ್ ಎಂಬುವರು ವಿಜಯವಾಣಿ ಜತೆ ಅಳಲುತೋಡಿಕೊಂಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಧಾನಮಂತ್ರಿ ಉಜ್ವಲ ಯೋಜನೆ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸುವ ಮೂಲಕ ಬಡ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಿ ಹೊಗೆಮುಕ್ತ ಸಮಾಜ ನಿರ್ಮಾಣ ಮಾಡುತ್ತಿದೆ. ಸರ್ಕಾರದ ಈ ಮಹತ್ವಕಾಂಕ್ಷಿ ಕಾರ್ಯಕ್ರಮದಿಂದ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಹಾಗೂ ಸಾಮಾನ್ಯವಾಗಿ ಗ್ಯಾಸ್ ಏಜೆನ್ಸಿಗಳಿಂದ ಸಂಪರ್ಕ ಪಡೆದಿರುವ ಗ್ರಾಹಕರಿಗೆ ಶುಲ್ಕ ಮಾತ್ರವೇ ಪಡೆದು ಪ್ರತಿ ತಿಂಗಳು ಗ್ಯಾಸ್ ಪೂರೈಕೆ ಮಾಡಬೇಕು. ಆದರೆ, ಏಜೆನ್ಸಿ ಹಾಗೂ ಏಜೆನ್ಸಿ ಕೆಲಸ ಮಾಡುವ ಸಿಬ್ಬಂದಿ ಸಾಗಣೆ ವೆಚ್ಚವೆಂದು ಹೇಳಿ 50 ರೂ.ನಿಂದ 100 ರೂ.ವರೆಗೆ ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ಗ್ರಾಹಕರಿಗೆ ಹೆಚ್ಚಿನ ಮೊತ್ತ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.

ಏಜೆನ್ಸಿ ಮಾಲೀಕರ ಬೆಂಬಲ!: ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಗ್ಯಾಸ್ ಏಜೆನ್ಸಿಗಳು ರಾಜ್ಯಾದ್ಯಂತ ಸಿಲಿಂಡರ್ ಡೋರ್ ಡೆಲಿವರಿಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಿವೆ. 14.2 ಕೆ.ಜಿ ಸಿಲಿಂಡರ್​ಗೆ 765.50 ರೂ. ಮಾತ್ರ ಪಡೆಯಬೇಕು. ಆದರೆ, ಏಜೆನ್ಸಿಗಳು ಪ್ರತಿ ಕಿ.ಮೀ.ಗೆ 1.50 ರೂ.ನಂತೆ ಸಾಗಣೆ ವೆಚ್ಚ ವಿಧಿಸಿ ಸೇರಿ 820 ರೂ. ತೆಗೆದುಕೊಳ್ಳುತ್ತಿದ್ದಾರೆ. ನಿಯಮಗಳನ್ನು ಅರಿತು ಗ್ರಾಹಕರು ಕೆಲವೊಮ್ಮೆ ಕಾರ್ವಿುಕರಿಗೆ ಪ್ರಶ್ನಿಸಿದರೆ ಸಿಲಿಂಡರ್ ಪೂರೈಕೆ ವಿಳಂಬ ಮಾಡಿ ತೊಂದರೆ ಕೊಡುತ್ತಾರೆ. ಈ ಅವ್ಯವಹಾರದ ಬಗ್ಗೆ ಏಜೆನ್ಸಿ ಮಾಲೀಕರಿಗೆ ಅರಿವಿದ್ದರೂ ಸಿಲಿಂಡರ್ ವಿತರಕರ ವಿರುದ್ಧ ಕ್ರಮ ಕೈಗೊಳ್ಳದೆ ಪರೋಕ್ಷ ಬೆಂಬಲಕ್ಕೆ ನಿಂತಿದ್ದಾರೆ ಎಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕೊರಟಗೆರೆ ಗ್ರಾಮದ ಸಿದ್ದರಾಜ ಎಂಬುವರು ಬೇಸರ ವ್ಯಕ್ತಪಡಿಸಿದರು.

ಗ್ಯಾಸ್ ಸಂಸ್ಥೆ ಹೇಳೋದೇನು?: ಇಂಡೇನ್, ಭಾರತ್ ಮತ್ತು ಎಚ್​ಪಿ ಗ್ಯಾಸ್ ಸಂಪರ್ಕ ಪಡೆದಿರುವ ಗ್ರಾಹಕರಿಗೆ ನಿಗದಿಪಡಿಸಿರುವ ಶುಲ್ಕ ಮಾತ್ರವೇ ಪಡೆದು ಗ್ಯಾಸ್ ಏಜೆನ್ಸಿಗಳು ಸಿಲಿಂಡರ್ ಡೆಲಿವರಿ ಮಾಡ ಬೇಕು. ಗ್ರಾಹಕರಿಂದ ಸಾಗಣೆ ಮತ್ತಿತರರ ವೆಚ್ಚಗಳನ್ನು ತೆಗೆದುಕೊಳ್ಳಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿ ಹೆಚ್ಚುವರಿ ಶುಲ್ಕ ಪಡೆಯುವ ಗ್ಯಾಸ್ ಏಜೆನ್ಸಿ ವಿರುದ್ಧ ಸಂಸ್ಥೆಗೆ ದೂರು ನೀಡಿದರೆ ಅಂಥವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಇಂಡಿಯನ್ ಆಯಿಲ್ ಕಾಪೋರೇಷನ್ (ಐಒಸಿಎಲ್) ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net