ಬಿಬಿಎಂಪಿ ಬಜೆಟ್​ ಮಂಡನೆಗೆ ಸದ್ಯವೇ ದಿನಾಂಕ ನಿಗದಿ ಮತ್ತು ವಿಡಿಯೋ ಕಾನ್ಫರೆನ್ಸ್​ ಮೂಲಕ ಎನ್ನುವುದೇ ವಿಶೇಷ

BBMP
Published on

ಬೆಂಗಳೂರು: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆಗೆ ಬಿಬಿಎಂಪಿ ಮುಂದಾಗುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರ ಸೋಮವಾರ ಅನುಮತಿ ನೀಡಿದೆ.

ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್​ಡೌನ್ ಘೋಷಣೆ ಆಗಿರುವುದರಿಂದ, ಸಾಮಾಜಿಕ ಅಂತರ ಕಾಯ್ದುಕೊಂಡು 2020-21ನೇ ಸಾಲಿನ ಬಿಬಿಎಂಪಿ ಆಯವ್ಯಯ ಮಂಡನೆಗೆ ಅನುಮತಿ ಕೋರಿ ಮೇಯರ್ ಎಂ. ಗೌತಮ್ ಕುಮಾರ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದೀಗ ಸರ್ಕಾರ ಹಸಿರು ನಿಶಾನೆ ನೀಡಿರುವುದರಿಂದ ಕರೊನಾ ತಡೆ ಯೋಜನೆಗಳಿಗೆ ಆರ್ಥಿಕ ಸೌಲಭ್ಯ ಒದಗಿಸಲು ಅನುಕೂಲವಾಗಲಿದೆ.

ಯಾವ ರೀತಿ ಬಜೆಟ್ ಮಂಡನೆ?: ಲಾಕ್​ಡೌನ್ ವೇಳೆ 20ರಿಂದ 25 ಜನರು ಆಡಳಿತಾತ್ಮಕ ದೃಷ್ಟಿಕೋನದಿಂದ ಸಾಮಾಜಿಕ ಅಂತರದ ಮೂಲಕ ಸಭೆ ಸೇರಲು ಅವಕಾಶವಿದೆ. ಇದನ್ನೇ ಬಳಸಿಕೊಂಡು ವಿಡಿಯೋ ಕಾನ್ಪರೆನ್ಸ್ ಮೂಲಕ ಆಯವ್ಯಯ ಮಂಡಿಸಲು ಪಾಲಿಕೆ ಸಿದ್ಧವಾಗುತ್ತಿದೆ. ಕೇಂದ್ರ ಕಚೇರಿ ಯಲ್ಲಿ ಮೇಯರ್, ಉಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಾಯಕರು ಹಾಗೂ ಪಾಲಿಕೆ ಆಯುಕ್ತರು ಮತ್ತು ಕೌನ್ಸಿಲ್ ಕಾರ್ಯದರ್ಶಿಗಳು ಕಾನ್ಪರೆನ್ಸ್​ನಲ್ಲಿ ಪಾಲ್ಗೊಳ್ಳಬಹುದು. ಪಾಲಿಕೆ 8 ವಲಯಗಳಲ್ಲಿ ತಲಾ 20ರಿಂದ 25 ಸದಸ್ಯರು ವಿಡಿಯೋ ಕಾನ್ಪರೆನ್ಸ್ ಮೂಲಕ ಬಜೆಟ್ ಮಂಡನೆಗೆ ಸಾಕ್ಷಿಯಾಗಲು ಅವಕಾಶವಿದೆ. ಇಲ್ಲೆಲ್ಲ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ.

ನಾಳೆ ಪೂರ್ವಭಾವಿ ಸಭೆ: ಬಜೆಟ್ ಮಂಡನೆಗೆ ಅವಕಾಶ ದೊರೆತಿದ್ದು, ಬುಧವಾರ ಪಾಲಿಕೆ ಎಲ್ಲ ವಿಭಾಗದ ಮುಖ್ಯಾಧಿಕಾರಿ ಗಳ ಜತೆ ಪೂರ್ವಭಾವಿ ಸಭೆ ನಡೆಸಿ ಎಲ್ಲ ವಿಭಾಗ ಗಳಿಗೆ ಅನುದಾನ ಹಂಚಿಕೆ, ಬಜೆಟ್ ಗಾತ್ರ ಮತ್ತು ಮಂಡನೆ ದಿನಾಂಕ ನಿರ್ಧರಿಸಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.

ಬಿಬಿಎಂಪಿ ಮೂಲಸೌಕರ್ಯಗಳು, ಕಾಮಗಾರಿಗಳಿಗೆ ಹಣ ಪಾವತಿ, ನೌಕರರ ವೇತನ, ಪೆನ್ಶನ್ ವಿತರಣೆಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈಗ ವಿಡಿಯೋ ಕಾನ್ಪರೆನ್ಸ್ ಮೂಲಕ ಬಜೆಟ್ ಮಂಡನೆಗೆ ಅವಕಾಶ ಸಿಕ್ಕಿದ್ದು, 2 ದಿನಗಳಲ್ಲಿ ಆಯವ್ಯಯ ಮಂಡನೆ ಬಗ್ಗೆ ಅಂತಿಮ ತೀರ್ಮಾನ ತಿಳಿಸುತ್ತೇವೆ.

| ಎಲ್. ಶ್ರೀನಿವಾಸ್ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net