ಅಪ್ಪಾ ನಮ್ಮನ್ನು ಬದುಕಲು ಬಿಡಿ ಎಂದರೂ ಕೇಳಲಿಲ್ಲ..: ಚಲಿಸುವ ರೈಲಿಗೆ ಬಿದ್ದು 4 ಮಕ್ಕಳು ಜತೆ ತಂದೆ ಆತ್ಮಹತ್ಯೆ! | Train

dk - 2025-06-11T131041.574
Published on

Train: ಪತ್ನಿ ಆಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟ ವ್ಯಕ್ತಿಯೊಬ್ಬ ತನ್ನ 4 ಚಿಕ್ಕ ಮಕ್ಕಳ ಜತೆ ಚಲಿಸುತ್ತಿರುವ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಹರಿಯಾಣದ ಫರಿದಾಬಾದ್​​ನಲ್ಲಿ ಮಂಗಳವಾರ ನಡೆದಿದೆ.

ಮನೋಜ್ ಮಹಾತೋ ​​(45) ಮಕ್ಕಳಾದ ಪವನ್ (10), ಕರು (9), ಮುರಳಿ (5), ಮತ್ತು ಚೋಟು (3) ಮೃತರು ಎಂದು ಗುರುತಿಸಲಾಗಿದೆ.

ಮನೋಜ್ ಮಹಾತೋ ತನ್ನ ಪತ್ನಿ ಪ್ರಿಯಾ ಜತೆ ಆಗಾಗ ಜಗಳವಾಡುತ್ತಿದ್ದರು. ಮೊನ್ನೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ತಾರಕಕ್ಕೇರಿದೆ. ಇದರಿಂದ ಮನನೊಂದ ಮನೋಜ್​​, ಮಕ್ಕಳನ್ನು ಉದ್ಯಾನವನಕ್ಕೆ ಕರೆ ತಂದು ಸಂಜೆವರೆಗೆ ಆಟವಾಡಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೃದಯ ವಿದ್ರಾವಕ ಘಟನೆ

ಮನೋಜ್​​ ಮಹಾತೋ ತನ್ನ ಮೊದಲ ಇಬ್ಬರ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಉಳಿದ ಇಬ್ಬರು ಮಕ್ಕಳನ್ನು ಕೈ ಬದಿಯಲ್ಲಿ ಹಿಡಿದುಕೊಂಡು ಬರುವ ರೈಲಿಗೆ(ಗೋಲ್ಡನ್ ಟೆಂಪಲ್ ಎಕ್ಸ್‌ಪ್ರೆಸ್ )ಎದುರು ಹೋಗಿ ನಿಂತಿದ್ದಾನೆ. ಇತ್ತ ಮಕ್ಕಳಿಗೆ ಅಪ್ಪ ಏನು ಮಾಡುತ್ತಿದ್ದಾನೆ ಎಂದು ಅರ್ಥವಾಗುತ್ತಿಲ್ಲ. ನಮಗೆ ಭಯವಾಗುತ್ತಿದೆ, ಅಪ್ಪಾ ನಮ್ಮನ್ನು ಬದುಕಲು ಬಿಡಿ ಎಂದು ಚಿರಾಡಿದ್ದಾರೆ. ಆದರೆ, ಮನೋಜ್​​ ಬರುವ ರೈಲಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಇತ್ತ ಲೋಕೋ ಪೈಲಟ್, ಹಾರ್ನ್ ಮಾಡಿ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ರೈಲು ಐವರ ಮೇಲೆ ಹಾದು ಹೋಗಿದೆ.

ಲೋಕೋ ಪೈಲಟ್ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಬಂದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡರು. ಮನೋಜ್ ಜೇಬಿನಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದ್ದು, ಅದರಲ್ಲಿ ತನ್ನ ಹೆಂಡತಿಯೇ ಆತ್ಮಹತ್ಯೆಗೆ ಕಾರಣ ಎಂದು ಬರೆದಿದ್ದಾನೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net