ಅಜೀರ್ಣ ಸಮಸ್ಯೆಗೆ ಉಪವಾಸವೇ ಪ್ರಥಮ ಪರಿಹಾರ!

indigestion
Published on
ಧನ್ವಂತರಿ
‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆಯ ಮಾತಾಗಲಿ, ‘ಆರೋಗ್ಯಂ ಭೋಜನಾಧೀನಮ್ ಅರ್ಥಾತ್ ಆರೋಗ್ಯವೆನ್ನುವುದು ನಾವು ಸೇವಿಸುವ ಭೋಜನವನ್ನು ಅವಲಂಬಿಸಿದೆ ಎನ್ನುವ ಸುಭಾಷಿತವಾಗಲಿ, ‘ಆಹಾರ ಶುದ್ಧಾತ್ ಸತ್ವ ಶುದ್ಧಿಃ’ ಎಂಬ ಸೇವಿಸುವ ಆಹಾರಕ್ಕೆ ಅನುಗುಣವಾಗಿ ನಮ್ಮ ಮನಸ್ಸು, ಜ್ಞಾಪಕಶಕ್ತಿ, ಬುದ್ಧಿಶಕ್ತಿ ಇರುತ್ತದೆಂಬ ಉಪನಿಷತ್ತಿನ ವಾಕ್ಯವಾಗಲಿ ಎಲ್ಲವೂ ಆಹಾರ ನಿಯಂತ್ರಣಕ್ಕಿರುವ ಶಾರೀರಿಕ ಹಾಗೂ ಮಾನಸಿಕ ಸಂಬಂಧವನ್ನು ಸ್ಪಷ್ಟವಾಗಿ ಹೇಳಿವೆ. ಜೀರ್ಣಶಕ್ತಿ ದುರ್ಬಲವಾಗಿರುವುದೇ ಎಲ್ಲಾ ರೋಗಗಳಿಗೂ ಮೂಲವೆಂದು ಹೇಳಿರುವ ಆಯುರ್ವೆದ, ಆಹಾರ ಸೇವನೆಯ ವಿಚಾರದಲ್ಲಿ ದೂರದರ್ಶಿತ್ವದ ಅನೇಕ ಮಾಹಿತಿಗಳತ್ತ ಬೆಳಕು ಚೆಲ್ಲಿದೆ. ಆಹಾರ ಸೇವನೆಯಲ್ಲಿ ಮಾಡುವ ಬದಲಾವಣೆಗಳಿಂದ ದೇಹದಲ್ಲಿ ಮೊದಲು ಉಂಟಾಗುವ ತೊಂದರೆಯೇ ಅಜೀರ್ಣ.

ಚರಕಸಂಹಿತೆಯಲ್ಲಿ ಅಜೀರ್ಣ ಉಂಟಾಗಲು ಕಾರಣಗಳನ್ನು ಸರಳವಾಗಿ ಪ್ರತಿಪಾದಿಸಲಾಗಿದೆ. ಊಟವನ್ನು ಮಾಡದೆಯೇ ಇರುವುದರಿಂದ, ಅತಿಯಾದ ಪ್ರಮಾಣದಲ್ಲಿ ಆಗಾಗ ಭೋಜನ ಮಾಡುವುದರಿಂದ, ಒಮ್ಮೆ ಹೆಚ್ಚು ಮತ್ತೊಮ್ಮೆ ಕಡಿಮೆ ಪ್ರಮಾಣ ಹೀಗೆ ನಿಯಂತ್ರಣವಿಲ್ಲದೆ ಆಹಾರ ಸೇವಿಸುವುದರಿಂದ, ದೇಹಕ್ಕೆ ಒಗ್ಗದ ನಮಗೆ ಹಿತವಲ್ಲದ ಆಹಾರವನ್ನು ಸ್ವೀಕರಿಸುವುದರಿಂದ, ಜೀರ್ಣಕ್ಕೆ ಕಷ್ಟಕರವಾದ, ಆಹಾರ ತಯಾರಿಸಿ ಹೊತ್ತು ಕಳೆದು ತಣ್ಣಗಾಗಿರುವ, ಅತಿಯಾಗಿ ಒಣಗುಣಗಳನ್ನೇ ಹೊಂದಿರುವ ಆಹಾರ ದ್ರವ್ಯಗಳನ್ನು ತಿನ್ನುವುದರಿಂದ, ಹಳತಾಗಿರುವ ಹಳಸಿರುವ ಕಲುಷಿತ ಗೊಂಡ ದುಷ್ಟ ಭೋಜನದಿಂದ, ವಿರುದ್ಧಾಹಾರ ಸೇವನೆಯಿಂದ, ವಾಸಿ ಸುವ ಪ್ರದೇಶಕ್ಕೆ ಹೊಂದಿಕೊಳ್ಳದ, ನಾವಿರುವ ಭೂಭಾಗದ್ದಲ್ಲದ, ಹಸಿದಿರುವಾಗ ಸಮಯದ ನಿಯಮ ಅನುಸರಿಸದೆ ಸೇವಿಸಿದ, ಕಾಲಕ್ಕೆ ಅನುಗುಣವಾಗಿ ಬೆಳೆದಿರದ ಆಹಾರವಸ್ತುಗಳ ಸೇವನೆಯಿಂದ, ಮಲಮೂತ್ರವೇ ಮೊದಲಾದ ಶಾರೀರಿಕ ವೇಗಗಳನ್ನು ಸರಿಯಾಗಿ ನಿಭಾಯಿಸದೇ ತಡೆಹಿಡಿಯುವುದರಿಂದ, ಸರಿಯಾದ ಜೀರ್ಣಪ್ರಕ್ರಿಯೆಗೆ ಅತ್ಯವಶ್ಯಕವಾದ ಜಠರದಲ್ಲಿರುವ ಅಗ್ನಿಯು ದೂಷಣೆಗೊಳಗಾಗುತ್ತದೆ. ಇದರಿಂದಾಗಿ ಸೇವಿಸುವ ಆಹಾರವು ಸುಲಭವಾಗಿ ಜೀರ್ಣಗೊಳ್ಳುವ ಗುಣಧರ್ಮವನ್ನು ಹೊಂದಿದ್ದರೂ ಅಪಚನವಾಗಿ ಅನ್ನವು ವಿಷರೂಪವನ್ನು ಹೊಂದುತ್ತದೆ. ಅಜೀರ್ಣವು ಆಗಬಾರದೆಂದರೆ ಮೊದಲು ಮಾಡಬೇಕಾದ ಕೆಲಸವೆಂದರೆ ಇಂತಹ ದುರಭ್ಯಾಸಗಳನ್ನು ತ್ಯಜಿಸುವುದು.

ಎಲ್ಲಾ ವಿಧವಾದ ಅಜೀರ್ಣಗಳ ಚಿಕಿತ್ಸೆಯಲ್ಲಿ ಲಂಘನಕ್ಕೆ ಮೊದಲ ಪ್ರಾಶಸ್ತ್ಯ. ಅಜೀರ್ಣವಾದೊಡನೆ ಔಷಧದ ಮೊರೆ ಹೋಗುವುದಲ್ಲ. ಏಕೆಂದರೆ ಹಸಿವು ಹೆಚ್ಚಿಸುವ, ಜೀರ್ಣಕ್ರಿಯೆ ಸಲೀಸಾಗಿಸುವ ಔಷಧಗಳ ಜೀರ್ಣವೂ ಈ ಸಂದರ್ಭದಲ್ಲಿ ಕಷ್ಟಕರವಾಗಿರುತ್ತದೆ! ಆಮಾಜೀರ್ಣದಲ್ಲಿ ಶುಂಠಿ ಹಾಗೂ ಕೊತ್ತಂಬರಿ ಬೀಜ ಹಾಕಿ ಕುದಿಸಿದ ನೀರಿನ ಸೇವನೆ ಫಲಪ್ರದ. ವಿದಗ್ಧಾಜೀರ್ಣದಲ್ಲಿ ಕಾದಾರಿದ ನೀರು ಅನುಕೂಲಕರ. ವಿಷ್ಟಬ್ಧಾಜೀರ್ಣದಲ್ಲಿ ಬಿಸಿಯಾದ ಕೈಯನ್ನು ಅಥವಾ ಬಿಸಿತುಪ್ಪವನ್ನು ಹೊಟ್ಟೆಗೆ ಸವರುವುದು ಲಾಭದಾಯಕವಾಗಿರುತ್ತದೆ. ಒಣದ್ರಾಕ್ಷಿ, ಜೇನುತುಪ್ಪಗಳೂ ಅಜೀರ್ಣ ಸರಿಗೊಳಿಸಲು ಸಹಕಾರಿ. ರಸಶೇಷಾಜೀರ್ಣದಲ್ಲಿ ಹಗಲು ಹೊತ್ತಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಪ್ರಯೋಜನವಾಗುತ್ತದೆ. ಹೊಟ್ಟೆಗೆ ಬಿಸಿನೀರಿನ ಶಾಖ ನೀಡುವುದೂ ಅನುಕೂಲಕರ.

ಒಂದು ಇನ್ನೊಂದರಿಂದ ಪರಿಹಾರ!: ಹಲಸಿನ ಹಣ್ಣು ತಿಂದು ಅಜೀರ್ಣವಾದರೆ ಅದು ಬಾಳೆಹಣ್ಣು ತಿಂದರೆ ಪರಿಹಾರವಾಗುತ್ತದೆ. ಬಾಳೆಹಣ್ಣಿನಿಂದಾದ ಅಜೀರ್ಣ ತುಪ್ಪದಿಂದ, ತುಪ್ಪದ ಅತಿ ಸೇವನೆಯಿಂದಾದ ಅಜೀರ್ಣ ಕಂಚಿಕಾಯಿ ರಸ ಸೇವನೆಯಿಂದ, ತೆಂಗಿನಕಾಯಿಯಿಂದ ಆಗಿರುವುದು ಹಳೆ ಕೆಂಪಕ್ಕಿಯ ಅನ್ನ ಹಾಗೂ ಭತ್ತದ ಅರಳಿನ ಸೇವನೆಯಿಂದ, ಮಾವಿನಹಣ್ಣು ಮಿತಿಮೀರಿ ತಿಂದು ಬಂದ ಅಜೀರ್ಣ ದೇಶೀ ಗೋವಿನ ಹಾಲು ಕುಡಿಯುವುದರಿಂದ ... ಹೀಗೆ ಪ್ರತಿಯೊಂದು ವಿಧದ ಅಜೀರ್ಣಕ್ಕೂ ಸರಳ ಪರಿಹಾರಗಳಿವೆ. ಆಹಾರ ಸೇವಿಸದೆ ಲಂಘನ ಮಾಡುವುದು ಮೊದಲ ಹೆಜ್ಜೆಯಾದರೆ ರೋಗ ಶಮನ ಔಷಧಗಳು ಸ್ವಲ್ಪಮಟ್ಟಿನಲ್ಲಿ ಆಗಿರುವ ಅಜೀರ್ಣವನ್ನು ಪರಿಹರಿಸುತ್ತವೆ. ಮಧ್ಯಮ ಪ್ರಮಾಣದ ಅಜೀರ್ಣವಿದ್ದಾಗ ವಿವಿಧ ಬಗೆಯ ಪಚನಕಾರಿ ಔಷಧಗಳು ಉಪಕಾರಿ ಆಗಿರುತ್ತದೆ. ಅಜೀರ್ಣವು ತೀವ್ರವಿದ್ದಾಗ ವಮನ, ವಿರೇಚನ, ಮಲಹೊರಹಾಕಲು ಗುದದ್ವಾರದಲ್ಲಿ ವರ್ತಿಚಿಕಿತ್ಸೆಯನ್ನೂ ವೈದ್ಯರು ನೀಡಬೇಕಾಗುತ್ತದೆ.

ಅಜೀರ್ಣವಿದ್ದಾಗ ವಿಲೇಪಿ ಎನ್ನುವ ಅನ್ನದ ತಿಳಿಗಂಜಿ, ನಯಗೊಳಿಸದ ಅಕ್ಕಿಯಿಂದ ಮಾಡಿದ ಮಂಥವೆಂಬ ಪಾನೀಯ, ಚೆನ್ನಂಗಿಬೇಳೆ, ತೊಗರಿಬೇಳೆ, ಹೆಸರುಬೇಳೆಗಳಿಂದ ಮಾಡಿದ ಯೂಷ ಎನ್ನುವ ಬೇಳೆಕಟ್ಟು, ತಾವರೆಯ ಗಡ್ಡೆ, ನೇರಳೆಹಣ್ಣು, ಬೇಲದಹಣ್ಣು, ದಾಳಿಂಬೆಹಣ್ಣು, ಆಡಿನಹಾಲು, ದೇಶೀಗೋವಿನ ಹಾಲು, ಅಲ್ಪ ಪ್ರಮಾಣದಲ್ಲಿ ತುಪ್ಪ, ಮೊಸರು, ಮಜ್ಜಿಗೆ, ಎಳ್ಳೆಣ್ಣೆ ಹಾಗೂ ಜೀರ್ಣಶಕ್ತಿ ಹೆಚ್ಚಿಸುವ ಎಲ್ಲಾ ಆಹಾರಗಳು ಪಥ್ಯಕರವಾಗಿದೆ. ಅಜೀರ್ಣವಿದ್ದಾಗ ಊಟಕ್ಕಿಂತ ಮೊದಲು ಸ್ವಲ್ಪ ಹೊತ್ತು ನಿದ್ದೆ ಮಾಡಿದರೆ ಪಚನಕ್ರಿಯೆ ಚುರುಕಾಗುತ್ತದೆ. ಅರಿತು ಆಹಾರ ಸೇವಿಸುವುದು ಎಲ್ಲವುಗಳಿಗಿಂತ ಅತಿಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net