ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ: ಹಲವೆಡೆ ಇಂಟರ್​ನೆಟ್​ ಸ್ಥಗಿತ

intrnet ban protest
Published on

ದೆಹಲಿ: ರೈತರ ದಂಗೆಗೆ ರಾಷ್ಟ್ರ ರಾಜಧಾನಿ ದೆಹಲಿ ರಣಾಂಗಣವಾಗಿದ್ದು, ಈ ಭಾಗದಲ್ಲಿ ಇಂಟರ್​ನೆಟ್​ ಸ್ಥಗಿತ ಮಾಡಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಿಂಪಡೆಯುವಂತೆ ರೈತರು ನಡೆಸುತ್ತಿರುವ ಹೋರಾಟ ಇಂದು ಹಿಂಸಾರೂಪಕ್ಕೆ ತಿರುಗಿದ್ದು, ಅನ್ನದಾತರ ಕೈಯಲ್ಲಿ ತಲವಾರ್ ಝಳಪಿಸಿದೆ. ಕೆಂಪುಕೋಟೆ ಮೇಲೆ ಮುತ್ತಿಗೆ ಹಾಕಿದ ಪ್ರತಿಭಟನಾನಿರತರು ಅನ್ಯ ಧ್ವಜಗಳನ್ನು ಹಾರಿಸಿದ್ದಾರೆ.

ಸಿಂಗು, ಗಾಜಿಪುರ ಬಾರ್ಡರ್​ನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಜಲಫಿರಂಗಿ, ಲಾಠಿಚಾರ್ಜ್​ ಅಸ್ತ್ರ ಪ್ರಯೋಗಿಸಿದ್ದರೂ ತಹಬದಿಗೆ ಬಂದಿಲ್ಲ. ಸರ್ಕಾರದ ಗೈಡ್​ಲೈನ್ಸ್​ ಪಾಲಿಸದ ಪ್ರತಿಭಟನಾನಿರತರು ಪೊಲೀಸ್‌ ಕೋಟೆ ಬೇಧಿಸಿ, ಬ್ಯಾರಿಕೇಡ್​ಗಳನ್ನೂ ಕಿತ್ತೆಸೆದು, ಲಾರಿ, ಬಸ್​ಗಳನ್ನೂ ಉರುಳಿಸಿ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದರು. ಕೆಂಪು ಕೋಟೆಗೂ ಮುತ್ತಿಗೆ ಹಾಕಿ, ರೈತ ಕಹಳೆ ಮೊಳಗಿಸಿದ್ದಾರೆ. ಪ್ರತಿಭಟನೆಯ ತೀವ್ರತೆ ಅರಿತ ಕೇಂದ್ರ ಸರ್ಕಾರ, ದೆಹಲಿಯ ಸಿಂಗು, ಗಾಜಿಪುರ, ಟಿಕ್ರಿ, ಮುಕರ್ಬಾ ಚೌಕ್ ಮತ್ತು ನಂಗ್ಲೋಯಿ ಪ್ರದೇಶ ಮತ್ತು ದೆಹಲಿ ಗಡಿ ಭಾಗದಲ್ಲಿ ಟೆಲಿಕಾಂ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದನ್ನೂ ಓದಿರಿ VIDEO| ಹಿಂಸಾಚಾರಕ್ಕೆ ತಿರುಗಿದ ‘ಟ್ರ್ಯಾಕ್ಟರ್​ ಪರೇಡ್​’, ತಲ್ವಾರ್​ ಹಿಡಿದು ಬಂದ ರೈತರು!

ಇಂದು ರಾತ್ರಿ 12 ಗಂಟೆವರೆಗೂ ತಾತ್ಕಾಲಿಕವಾಗಿ ಇಂಟರ್​ನೆಟ್​ ಸಂಪರ್ಕ ಕಡಿತ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಗಾಳಿ ಸುದ್ದಿ ಹರಡುವ, ಪರಿಸ್ಥಿತಿ ಮತ್ತಷ್ಟು ಕೈಮೀರುವ ಸಾಧ್ಯತೆಯನ್ನು ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net