

ಚಿಕ್ಕಮಗಳೂರು: ಮನೆಯಲ್ಲಿ ಇರಿಸಿದ್ದ ಬಂದೂಕನ್ನು ಹೊರತೆಗೆಯುವಾಗ ಮಿಸ್ ಫೈರ್ ಆಗಿ ರೈತ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಚಿಕ್ಕಮಗಳೂರು ತಾಲೂಕಿನ ಕಳವಾಸೆ ಗ್ರಾಮದಲ್ಲಿ ಸಂಭವಿಸಿದೆ.
ಕಳವಾಸೆ ಗ್ರಾಮದ ಆನಂದ್ (47 )ಸ್ಥಳದಲ್ಲೇ ಸಾವಿಗೀಡಾದ ರೈತ. ಬಂದೂಕಿನ ಪರವಾನಿಗೆ ಹೊಂದಿದ್ದ ಆನಂದ್, ಮನೆಯ ಕೋಣೆಯಲ್ಲಿ ಇರಿಸಿದ್ದ ಬಂದೂಕು ತೆಗೆಯಲು ಹೋದಾಗ ಏಕಾಏಕಿ ಗನ್ ಫೈರ್ ಆಗಿದೆ. ತಕ್ಷಣವೇ ಗುಂಡು ನೇರವಾಗಿ ಎದೆಯನ್ನು ಸೀಳಿದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಆನಂದ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.