

ಕೇರಳ: ಕಳೆದ ಕೆಲವು ದಿನಗಳಿಂದ ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬಳಿಕ ಮಲಯಾಳಂ ಚಿತ್ರರಂಗದ ಅನೇಕ ಸ್ಟಾರ್ ನಟಿಯರು ತಮಗಾದ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಮುಕ್ತವಾಗಿ ಕ್ಯಾಮರಾ ಮುಂದೆ ಮಾತನಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಯಾರಿಂದ ತಾವು ಇಂತಹ ಕೆಟ್ಟ ಪರಿಸ್ಥಿತಿ ಎದುರಿಸಿದೆವು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಇಂಡಸ್ಟ್ರಿಯ ಕರಾಳ ಮುಖವನ್ನು ಬಟಾಬಯಲು ಮಾಡ್ತಿದ್ದಾರೆ. ಸದ್ಯ ಈ ಸಾಲಿಗೆ ಇದೀಗ ಮಲಯಾಳಂ ನಟಿ ಶ್ರೀದೇವಿಕಾ ಸೇರ್ಪಡೆಗೊಂಡಿದ್ದಾರೆ.
ಇತ್ತೀಚೆಗಷ್ಟೇ ನಟಿ ಮಿನು ಮುನೀರ್, ಗೀತಾ ವಿಜಯನ್ ಮಾಡಿದ ಆರೋಪಗಳನ್ನು ಆಲಿಸಿದ ನಟಿ ಶ್ರೀದೇವಿಕಾ, ತಾನು ಅನುಭವಿಸಿದ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳುವುದಕ್ಕೆ ಇದೇ ಸೂಕ್ತ ಸಮಯವೆಂದು ಭಾವಿಸಿ, ಇದೀಗ ಕ್ಯಾಮರಾ ಮುಂದೆ ಬಹಿರಂಗವಾಗಿ ಇಂಥ ವ್ಯಕ್ತಿಯಿಂದಲೇ ನನಗೆ ತುಂಬ ನೋವು ಪಡುವಂತ ಪರಿಸ್ಥಿತಿ ಎದುರಾಗಿತ್ತು ಎಂದಿದ್ದಾರೆ. ಅಸಲಿಗೆ ಚಿತ್ರ ನಿರ್ದೇಶಕ ತುಳಸಿದಾಸ್ ಅಂದು ನನ್ನೊಂದಿಗೆ ತೀರ ಅಸಭ್ಯವಾಗಿ ನಡೆದುಕೊಂಡಿದ್ದ ಎಂದು ನಟಿ ಗಂಭೀರ ಆರೋಪ ಎಸಗಿದ್ದಾರೆ.
"2006ರಲ್ಲಿ 'ಅವನ ಚಂಡಿಯುದೆ ಮಗನ್' ಚಿತ್ರದ ಚಿತ್ರೀಕರಣದಲ್ಲಿ ನಾನು ಭಾಗಿಯಾಗಿದ್ದೆ. ಶೂಟಿಂಗ್ ಸಮಯದಲ್ಲಿ ಆತ ನನ್ನೊಂದಿಗೆ ತೀರ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ. ನಾನು ಹಲವು ಬಾರಿ ಎಚ್ಚರಿಸಿದ್ದೆ, ಆದ್ರೂ ಇದು ಅಂತ್ಯ ಕಾಣಲಿಲ್ಲ. ನಾನು ಮಲಗಿದ್ದ ಕೋಣೆಯ ಬಾಗಿಲನ್ನು ಮಧ್ಯರಾತ್ರಿಯಂದು ಜೋರಾಗಿ ಬಡಿಯುತ್ತಿದ್ದ. ತದನಂತರ ನನ್ನ ತಾಯಿ ಕೂಡ ಅದೇ ರೂಮ್ನಲ್ಲಿ ನನ್ನೊಂದಿಗೆ ನಿದ್ರಿಸಲು ಬಯಸಿದರು. ಇಷ್ಟಾದರೂ ಸಹ ತಡರಾತ್ರಿಯಲ್ಲಿ ಕೋಣೆಯ ಬಾಗಿಲ ಬಡಿಯುವುದನ್ನು ಆತ ಮುಂದುವರೆಸಿದ್ದ. ನಿರಂತರವಾಗಿ ಮುಂದಿನ ನಾಲ್ಕು ದಿನಗಳು ಅದೇ ರೀತಿ ಮಾಡಿದ್ದ" ಎಂದು ನಟಿ ಆರೋಪಿಸಿದ್ದಾರೆ.
"ಮಗಳ ಸುರಕ್ಷತೆಯ ಬಗ್ಗೆ ಚಿಂತಿಸಿದ ನನ್ನ ತಾಯಿ ನಂತರ ಮತ್ತೊಬ್ಬ ನಟನಿಗೆ ಈ ವಿಷಯ ಮುಟ್ಟಿಸಿದರು. ಅವರ ಸಹಾಯದಿಂದ ನಾನು ಮತ್ತು ನನ್ನಮ್ಮ ಬೇರೆ ರೂಮ್ಗೆ ಸ್ಥಳಾಂತರಗೊಂಡೆವು. 2018ರಲ್ಲಿ ಮಲಯಾಳಂ ಚಲನಚಿತ್ರ ಕಲಾವಿದರ ಸಂಘವು (ಅಮ್ಮ) ನಾನು ಈ ವಿಷಯಕ್ಕೆ ಸಂಬಂಧಿಸಿದಂತೆ ಕೊಟ್ಟ ದೂರನ್ನು ಲೆಕ್ಕಿಸದೆ, ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಯಿತು" ಎಂದು ಶ್ರೀದೇವಿಕಾ ಆರೋಪಿಸಿದ್ದಾರೆ.