ಇಂದಿರಾ ಗಾಂಧಿ ಪರಿಸ್ಥಿತಿ ನಿನಗೂ ಬರುತ್ತದೆ: ಎಮರ್ಜೆನ್ಸಿ ಪ್ರಚಾರದ ನಡುವೆ ಕಂಗನಾಗೆ ಕೊಲೆ ಬೆದರಿಕೆ

Kangana
Published on

ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್ ನಟಿಸಿರುವ "ಎಮರ್ಜೆನ್ಸಿ" ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ ಟ್ರೈಲರ್​ ಬಿಡಗಡೆಯಾಗಿ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಸದ್ಯ ಚಿತ್ರತಂಡ ಪ್ರಚಾರದಲ್ಲಿ ಬಿಜಿಯಾಗಿದ್ದು, ಇದರ ನಡುವೆ ನಟಿ ಕಂಗನಾಗೆ ಕೊಲೆ ಬೆದರಿಕೆ ಬಂದಿದೆ.

ಕಂಗನಾಗೆ ಜೀವ ಬೆದರಿಕೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಸಿಖ್ಖರ ವೇಷ ಧರಿಸಿ ಕುಳಿತಿರುವ ಗುಂಪೊಂದು ಎಮರ್ಜೆನ್ಸಿ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಕಂಗನಾಗೆ ಬೆದರಿಕೆ ಹಾಕಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ಕಂಗನಾ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಮತ್ತು ಪಂಜಾಬ್​ ಪೊಲೀಸರಿಗೆ ಟ್ಯಾಗ್​ ಮಾಡಿದ್ದಾರೆ. ಈ ಸಂಬಂಧ ದೂರು ಸಹ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ವೈರಲ್​ ವಿಡಿಯೋದಲ್ಲಿ ಆರು ಪುರುಷರ ಗುಂಪೊಂದು ಒಂದು ರೂಮ್​ ಒಳಗೆ ವೃತ್ತಾಕಾರದಲ್ಲಿ ಕುಳಿತಿರುವುದನ್ನು ಕಾಣಬಹುದು. ಅವರಲ್ಲಿ ಇಬ್ಬರು ನಿಹಾಂಗ್​ ಸಿಖ್ಖರಂತೆ ವೇಷ ಧರಿಸಿದ್ದಾರೆ. ಎಮರ್ಜೆನ್ಸಿ ಸಿನಿಮಾ ಬಿಡುಗಡೆಯಾದರೆ, ಸಿಖ್ ಸಮುದಾಯವು ಅದನ್ನು ಖಂಡಿಸುತ್ತದೆ ಎಂದು ವ್ಯಕ್ತಿಯೊಬ್ಬರು ಎಚ್ಚರಿಸಿದ್ದಾರೆ. ನಿಮ್ಮ ಚಲನಚಿತ್ರವನ್ನು ಚಪ್ಪಲಿಗಳೊಂದಿಗೆ ಎದುರಿಸಲಾಗುವುದು ಎಂದು ಹೇಳಿದ್ದಾರೆ.

ಉಗ್ರ ಭಿಂದ್ರನ್‌ವಾಲೆಯನ್ನು ಶ್ಲಾಘಿಸುವ ವಿಡಿಯೋಗಳನ್ನು ಪೋಸ್ಟ್ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಸಾಮಾಜಿಕ ಜಾಲತಾಣ ಇನ್ಫ್ಲುಯೆನ್ಸರ್​ ವಿಕ್ಕಿ ಥಾಮಸ್ ಸಿಂಗ್, ಎಮರ್ಜೆನ್ಸಿ ಸಿನಿಮಾವು ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯನ್ನು ಭಯೋತ್ಪಾದಕನಂತೆ ಬಿಂಬಿಸಿದ್ದರೆ, ನೀವು ಯಾವ ಚಿತ್ರದಲ್ಲಿ, ಯಾರ ಪಾತ್ರವನ್ನು ಮಾಡಿದ್ದೀರೋ ಆ ವ್ಯಕ್ತಿಗೆ (ಇಂದಿರಾ ಗಾಂಧಿ) ಏನಾಯಿತು ಎಂಬುದನ್ನು ನೆನಪಿಡಿ ಎನ್ನುವ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ.

ಅಂದಹಾಗೆ ಎಮರ್ಜೆನ್ಸಿ ಸಿನಿಮಾ ಸೆ. 6ಕ್ಕೆ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನವೇ ಎಮರ್ಜೆನ್ಸಿ ಸಿನಿಮಾ ಭಾರೀ ವಿರೋಧವನ್ನು ಎದುರಿಸುತ್ತಿದೆ. ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಸೇರಿದಂತೆ ಹಲವಾರು ಸಂಘಟನೆಗಳು, ಎಮರ್ಜೆನ್ಸಿ ಸಿನಿಮಾ 'ಸಿಖ್ ವಿರೋಧಿ' ನಿರೂಪಣೆಯನ್ನು ಉತ್ತೇಜಿಸುತ್ತದೆ ಮತ್ತು ಸಿಖ್ಖರನ್ನು 'ಪ್ರತ್ಯೇಕವಾದಿಗಳು' ಎಂದು ತಪ್ಪಾಗಿ ಚಿತ್ರಿಸುತ್ತದೆ ಎಂದು ಆರೋಪಿಸಿ, ಚಿತ್ರದ ಮೇಲೆ ನಿಷೇಧಕ್ಕೆ ಕರೆ ನೀಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net