

ಬೆಂಗಳೂರು: ಹಳೆಯ ವಿದ್ಯಾರ್ಥಿಗಳು ವಾರ್ಷಿಕ ಪ್ರವಾಸಕ್ಕೆಂದು ಗೋವಾಗೆ ತೆರಳಿದ್ದ ವೇಳೆ ಧಾರವಾಡದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಅಪಘಾತ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶವೊಂದು ಹರಿದಾಡುತ್ತಿದ್ದೆ.
ಹೌದು. ಫೇಸ್ಬುಕ್ ಬಳಕೆದಾರನೊಬ್ಬ ಫೋಟೋಗಳನ್ನು ಶೇರ್ ಮಾಡಿ, ಮೃತರ ಆತ್ಮಕ್ಕೆ ಶಾಂತಿ (RIP) ಕೋರಿದ್ದಾನೆ. 17 ಮಹಿಳಾ ವೈದ್ಯರು ದಾವಣಗೆರೆಯಿಂದ ಗೋವಾ ಪ್ರವಾಸಕ್ಕೆ ತೆರಳಿದ್ದ ಮಿನಿಬಸ್ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಮರಳು ತುಂಬಿದ ಟಿಪ್ಪರ್ಗೆ ಡಿಕ್ಕಿ ಹೊಡೆದು ಎಲ್ಲರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕರ್ನಾಟಕದ ದಾವಣಗೆರೆ ಜೆಜೆಎಂಎಂ ಕಾಲೇಜಿನ ಸ್ತ್ರೀರೋಗತಜ್ಞ ಪ್ರಾಧ್ಯಾಪಕರು. ಧಾರವಾಡದಲ್ಲಿ ಶುಕ್ರವಾರ ಬೆಳಗ್ಗೆ 7.30ಕ್ಕೆ ಅಪಘಾತ ಸಂಭವಿಸಿದೆ ಎಂದು ಬರೆದು ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.
ಆದರೆ, ಫೇಸ್ಬುಕ್ ಬಳಕೆದಾರ ಹೇಳಿರುವುದು ಸುಳ್ಳು ಎಂಬುದು ನ್ಯೂಸ್ಮೀಟರ್ ವೆಬ್ಸೈಟ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗವಾಗಿದೆ. ಅನೇಕ ವೆಬ್ಸೈಟ್ ಮತ್ತು ನ್ಯೂಸ್ ಪೇಪರ್ಗಳಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಅಪಘಾತ ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದೆ.
ಔಟ್ಲುಕ್ ಮತ್ತು ಇಂಡಿಯಾ ಟುಡೆ ವರದಿ ಪ್ರಕಾರ ಮೃತರೆಲ್ಲರೂ ದಾವಣಗೆರೆಯ ಸೇಂಟ್ ಪೌಲ್ ಶಾಲೆಯ 1989ರ ಬ್ಯಾಚಿನ ವಿದ್ಯಾರ್ಥಿಗಳು. ವಾರ್ಷಿಕ ಹಳೆಯ ವಿದ್ಯಾರ್ಥಿಗಳ ಪ್ರವಾಸಕ್ಕೆ ಒಟ್ಟಿಗೆ ಸೇರಿದ್ದರು. ಎಲ್ಲರು ಒಟ್ಟಾಗಿ ಮಿನಿಬಸ್ ಮಾಡಿಕೊಂಡು ಜನವರಿ 15ರಂದು ಗೋವಾಗೆ ತೆರಳಿದ್ದರು. ಮುಂಜಾನೆ 7.30ರ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಟಿಪ್ಪರ್ಗೆ ಡಿಕ್ಕಿ ಹೊಡೆದ ಅಪಘಾತ ಸಂಭವಿಸಿತ್ತು.
ಧಾರವಾಡ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್ ಹೇಳುವ ಪ್ರಕಾರ ಅಪಘಾತದಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 9 ಮಹಿಳೆಯರು. ಮೃತರೆಲ್ಲರೂ ವೈದ್ಯೆಯರು ಎಂಬ ವೈರಲ್ ಪೋಸ್ಟ್ ಸುಳ್ಳು. ಮೃತರಲ್ಲಿ ಒಬ್ಬರೇ ಮಾತ್ರ ವೈದ್ಯರಿದ್ದರು. ಎಲ್ಲರು ಕೂಡ ಸೇಂಟ್ ಪೌಲ್ ಶಾಲೆಯ ಹಳೆಯ ವಿದ್ಯಾರ್ಥಿಗಳು ಎಂದು ಸ್ಪಷ್ಟನೆ ನೀಡಿದ್ದಾರೆ.
ರಸ್ತೆ ಅಪಘಾತದಲ್ಲಿ 17 ಮಂದಿ ಮಹಿಳಾ ವೈದ್ಯರು ಮೃತಪಟ್ಟಿದ್ದಾರೆ ಎಂದು ವೈರಲ್ ಮಾಡಿರುವ ಪೋಸ್ಟ್ ಸುಳ್ಳೆಂಬುದು ಫ್ಯಾಕ್ಟ್ಚೆಕ್ನಿಂದ ಬಯಲಾಗಿದೆ. (ಏಜೆನ್ಸೀಸ್)