ರಕ್ಷಣಾ ಸಾಮಗ್ರಿ ಆಮದಿನಿಂದ ರಫ್ತಿನತ್ತ ಭಾರತ: ಬಜೆಟ್ ಬಗ್ಗೆ ತಜ್ಞ ಅಭಿಪ್ರಾಯ

Page 8
Published on
| ಬಿ.ಎಸ್. ಸುದರ್ಶನ ವಿಂಗ್ ಕಮಾಂಡರ್(ನಿ)

ಕಳೆದ ವರ್ಷ ರಕ್ಷಣಾ ವಲಯಕ್ಕೆ ನೀಡಿದ 4.28 ಲಕ್ಷ ಕೋಟಿ ರೂ. ಅನುದಾನದಲ್ಲಿ 1.35 ಲಕ್ಷ ಕೋಟಿ ರೂ.ಯಷ್ಟನ್ನು ರಕ್ಷಣಾ ಸಾಮಗ್ರಿಗಳನ್ನು ಕೊಳ್ಳಲು ಕೊಡಲಾಗಿತ್ತು. ಈ ವರ್ಷದ ಬಜೆಟ್ಟಿನಲ್ಲಿ, 1.52 ಲಕ್ಷ ಕೋಟಿ ರೂ. ಅಂದರೆ ಸುಮಾರು ಶೇ.12 ಹೆಚ್ಚಳವಾಗಿದೆ. ಆತ್ಮನಿರ್ಭರ ಭಾರತದ ಧ್ಯೇಯವನ್ನು ಬಲಪಡಿಸುವ ಮತ್ತು ಈ ಅನುದಾನ ವಿದೇಶಗಳಿಗೆ ಮತ್ತು ಕೆಲವು ಏಜೆಂಟರುಗಳಿಗೆ ಹರಿದು ಹೋಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.

ಸೈನ್ಯದ ಆಧುನೀಕರಣ, ಸಮರ ಸಾಮಗ್ರಿಗಳ ಸಂಶೋಧನೆ, ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗಳಿಗೆ ಒತ್ತು ನೀಡಿರುವುದು ಬಹಳ ಪ್ರಮುಖವಾದ ಅಂಶ. ಈ ಮುಂಗಡಪತ್ರದಲ್ಲಿ ಹೊರಬಂದಿರುವ ಪ್ರಮುಖ ಮತ್ತು ವಿಶೇಷ ಅಂಶವೆಂದರೆ ಶೇ.25 ರಕ್ಷಣಾ ವಲಯದ ಬಜೆಟ್ಟನ್ನು ರಕ್ಷಣಾ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿಡಬೇಕು ಎಂಬುದು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಸ್ಟಾರ್ಟಪ್, ಖಾಸಗಿ ಉದ್ಯಮಿಗಳಿಗೆ ಮತ್ತು ಐಐಟಿ, ಐಐಎಸ್​ಸಿಯಂತಹ ಶಿಕ್ಷಣ ಸಂಸ್ಥೆಗಳಿಗೆ ಮುಕ್ತವಾಗಿ ತೆರೆಯಬೇಕು ಎಂಬುದು. ಇಂತಹ ಮಹತ್ವದ ನಿರ್ಧಾರದಿಂದಾಗಿ ಭವಿಷ್ಯದಲ್ಲಿ ಹಲವಾರು ಅವಿಷ್ಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಇಲ್ಲಿಯವರೆಗೂ ರಕ್ಷಣಾ ವಲಯಕ್ಕೆ ಬೇಕಾದ ಸುಮಾರು 2800 ವಿವಿಧ ವಸ್ತುಗಳನ್ನು ಆಮದು ಮಾಡಿಕೊಳ್ಳದೆ ಅವುಗಳನ್ನು ಭಾರತದಲ್ಲೇ ತಯಾರಿಸಬೇಕು ಎನ್ನುವ ಆದೇಶ ಹೊರಟಿದೆ. ಇದರಿಂದಾಗಿ ಎಂಎಸ್​ಎಂಇಗಳಿಗೆ ಪೋ›ತ್ಸಾಹ ದೊರೆತಿದೆ. ಕಳೆದ ವರ್ಷದ ಬಜೆಟ್ಟಿನಲ್ಲಿ ಶೇ.58 ಅನುದಾನವನ್ನು ಸ್ಥಳೀಯ ಸಮರ ಸಾಮಗ್ರಿ ಉತ್ಪಾದನೆ ಮಾಡುವ ಕಂಪನಿಗಳಿಗೆ ಮೀಸಲಿಡಬೇಕು ಎಂದಿತ್ತು. ಇದರಿಂದ ಏಳು ಹೊಸ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು (ಡಿಫೆನ್ಸ್ ಪಿಎಸ್​ಯುು) ಪ್ರಾರಂಭವಾದವು. ಈ ವರ್ಷದ ಬಜೆಟ್ಟಿನಲ್ಲಿ ಇದನ್ನು ಶೇ.68ಕ್ಕೆ ಹೆಚ್ಚಿಸಲಾಗಿರುವುದು ಇನ್ನಷ್ಟು ಹೊಸ ಉದ್ಯಮಗಳ ಆರಂಭಕ್ಕೆ ಕಾರಣವಾಗಲಿದೆ. ಡಿಆರ್​ಡಿಒ, ಇಸ್ರೊದಂತಹ ಪ್ರಯೋಗಾಲಯಗಳನ್ನು ಖಾಸಗಿ ಸಂಸ್ಥೆಗಳೂ ಮುಕ್ತವಾಗಿ ಉಪಯೋಗಿಸಿಕೊಳ್ಳಬಹುದು ಎನ್ನುವ ಸರ್ಕಾರದ ನೀತಿಯಿಂದಾಗಿ ಸಣ್ಣ ಪುಟ್ಟ ಕಂಪನಿಗಳೂ ರಕ್ಷಣಾ ಸಾಮಗ್ರಿ ಉತ್ಪಾದಿಸಲು ಪೋ›ತ್ಸಾಹ ನೀಡಿದಂತಾಗುತ್ತದೆ.

83 ತೇಜಸ್ ಯುದ್ಧ ವಿಮಾನಗಳನ್ನು ವಾಯುಸೇನೆಗೆ ಹಂತ ಹಂತವಾಗಿ ಒದಗಿಸಿಕೊಡಲು ಸರ್ಕಾರದ ಅನುಮತಿ ದೊರೆತಿದೆ. ಹಾಗಾಗಿ ಬೆಂಗಳೂರಿನ ಎಚ್​ಎಎಲ್​ನಲ್ಲಿ ತೇಜಸ್ ವಿಮಾನಗಳ ಉತ್ಪಾದನೆಯನ್ನು ಪ್ರತಿ ವರ್ಷ ಮೂವತ್ತೆರಡು ವಿಮಾನಗಳಿಗೆ ಹೆಚ್ಚಿಸಲಾಗಿದೆ. ಯುದ್ಧ ಸಾಮಗ್ರಿಗಳನ್ನು ಬಹು ದೊಡ್ಡ ಮೊತ್ತದಲ್ಲಿ ಆಮದು ಮಾಡಿಕೊಳ್ಳುತ್ತಿದ್ದ ಭಾರತ ಭವಿಷ್ಯದಲ್ಲಿ ಬಹುದೊಡ್ಡ ನಿರ್ಯಾತದ ಮಾರುಕಟ್ಟೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net