

ಬಾಗಲಕೋಟೆ: ದಾವಣಗೆರೆಯ ಚನ್ನಗಿರಿ ಲಾಕಪ್ ಡೆತ್ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೃತ ಆದಿಲ್ ಕುಟುಂಬಸ್ಥರು ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷಗಳು ರಾಜ್ಯ ಸರ್ಕಾರವನ್ನು ದೂಷಿಸಿ, ಮಾತನಾಡುತ್ತಿದೆ. ಈ ವಿಚಾರ ಕುರಿತು ಇಂದು ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯ ಸರ್ಕಾರ ವ್ಯವಸ್ಥೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
"ಮೃತ ಆದಿಲ್ ತಂದೆಯೇ ಎರಡು ಹೇಳಿಕೆ ನೀಡಿದ್ದಾರೆ. ಒಮ್ಮೆ ಲೋ ಬಿಪಿ ಅಂತಾ ಹೇಳಿದ್ರೆ, ಮತ್ತೊಂದೆಡೆ ಲಾಕಪ್ ಡೆತ್ ಅಂತಿದ್ದಾರೆ. ರಾಜ್ಯ ಸರ್ಕಾರ ಇಲ್ಲಿಯವರೆಗೂ ಪರಿಹಾರ ಕೊಟ್ಟಿಲ್ಲ ಅನ್ನೋದೇ ಆಶ್ಚರ್ಯ. ಮುಸ್ಲಿಂ ಅಂದೋಡನೆ ಪರಿಹಾರ ಘೋಷಣೆ ಮಾಡೋದು ಸರ್ಕಾರದ ನಿಲುವು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ನೇಹಾ ಪ್ರಕರಣದಿಂದ ಚನ್ನಗಿರಿ ಪ್ರಕರಣಗಳೇ ಸಾಕ್ಷಿ" ಎಂದರು.
"ಸಿಎಂ, ಗೃಹ ಸಚಿವರು ಭಿನ್ನ ಹೇಳಿಕೆ ಕೊಡುತ್ತಾರೆ. ನೇಹಾ ಕೊಲೆ ವೈಯಕ್ತಿಕ ಅಂತ ಒಬ್ಬರು ಹೇಳಿದ್ರೆ, ಇದಕ್ಕೂ ಲವ್ ಜಿಹಾದ್ಗೂ ಸಂಬಂಧ ಇಲ್ಲ ಅಂತ ಮತ್ತೊಬ್ಬರು ಹೇಳುತ್ತಾರೆ. ಏನೇ ತೀರ್ಮಾನಕ್ಕೆ ಬರಬೇಕಾದ್ರೂ ತನಿಖೆ ನಂತರ ಬರಬೇಕು. ನೀವು ಸತ್ಯ ಹರಿಶ್ಚಂದ್ರರು ತಾನೆ? ಪ್ರಕರಣ ಸಿಬಿಐಗೆ ಯಾಕೆ ಕೊಡ್ತಿಲ್ಲ? ಈ ರೀತಿ ಕೊಲೆ, ಸುಲಿಗೆ ಹಿಂದೆಂದು ನೋಡಿರಲಿಲ್ಲ. ಈ ಎಲ್ಲಾ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ" ಎಂದು ಹೇಳಿದರು.