

ಕಂದಾಯ ಇಲಾಖೆ ಮತ್ತೊಂದು ವಿಶೇಷ ಆಂದೋಲನಕ್ಕೆ ಸಜ್ಜಾಗಿದೆ. ಮೃತರ ಹೆಸರಿನಲ್ಲಿ ಉಳಿದಿರುವ ಜಮೀನಿನ ದಾಖಲೆಗಳನ್ನು ವಾರಸುದಾರರಿಗೆ ವರ್ಗಾವಣೆ ಮಾಡುವ ಸಲುವಾಗಿ ಮನೆ ಬಾಗಿಲಿಗೇ ಪೌತಿ ಖಾತೆ ತಲುಪಿಸಲಿದೆ. ಜನವರಿ 27ರಂದು ಗದಗ ಜಿಲ್ಲೆಯಿಂದ ಚಾಲನೆ ನೀಡಲಾಗುತ್ತದೆ. ಆ ನಂತರ ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತದೆ. ರಾಜ್ಯದಲ್ಲಿರುವ ಒಟ್ಟು 4.11 ಕೋಟಿ ಜಮೀನುಗಳನ್ನು ಆಧಾರ್ ಮೂಲಕ ಇ-ಕೆವೈಸಿ ಮಾಡುವ ಯೋಜನೆ ಇದ್ದು, ಈವರೆಗೆ 2.2 ಕೋಟಿ ಜಮೀನು ಇ-ಕೆವೈಸಿ ಮಾಡಲಾಗಿದೆ. ಈ ಪೈಕಿ 51.13 ಲಕ್ಷ ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ ಎಂಬ ಸಂಗತಿ ಈ ವೇಳೆ ಕಂಡುಬಂದಿದೆ. ಈ ಜಮೀನುಗಳ ಪಹಣಿಯಲ್ಲಿ ಮೃತರ ಹೆಸರು ಬರುತ್ತಿದೆ. ಇದರಿಂದ ವಾರಸುದಾರರಿಗೆ ಕೆಲವೊಂದು ಸಮಸ್ಯೆ ಎದುರಾಗಿದೆ. ಪೌತಿ ಖಾತೆ ಅಭಿಯಾನದ ಮೂಲಕ ಈ ತೊಂದರೆ ಬಗೆಹರಿಸುವುದು ಸರ್ಕಾರದ ಉದ್ದೇಶ. ಇದರಿಂದ ಅರ್ಹರಿಗೆ ಸುಲಭವಾಗಿ ಪೌತಿ ಖಾತೆ ಲಭ್ಯವಾಗುತ್ತದೆ ಹಾಗೂ ಸರ್ಕಾರದ ಕೆಲಸವೂ ಸುಗಮವಾಗುತ್ತದೆ. ಈ ಯೋಜನೆಗಾಗಿ ಪ್ರತ್ಯೇಕ ಸಾಫ್ಟ್ವೇರ್ ಸಿದ್ಧವಾಗಿದೆ. ಗ್ರಾಮ ಲೆಕ್ಕಿಗರೇ ಮನೆ ಮನೆಗೆ ಹೋಗಿ ವಾರಸುದಾರರ ನಿಖರ ಮಾಹಿತಿ ಪಡೆಯುತ್ತಾರೆ. ಆಧಾರ್ ಮೂಲಕ ಒಟಿಪಿ ಪಡೆದು ಖಾತೆ ನೀಡಿಕೆ ಪ್ರಕ್ರಿಯೆ ನಡೆಸುತ್ತಾರೆ. ಈ ಹಿಂದೆಯೂ ಪೌತಿಖಾತೆ ಆಂದೋಲನ ರಾಜ್ಯದಲ್ಲಿ ನಡೆದಿತ್ತಾದರೂ ನಿರೀಕ್ಷಿತ ಪರಿಣಾಮ ಆಗಿರಲಿಲ್ಲ.
ರಾಜ್ಯದಲ್ಲಿ ಕಂದಾಯ ಇಲಾಖೆ ವಿವಿಧ ಕಾರ್ಯಕ್ರಮಗಳ ಮೂಲಕ ಸುದ್ದಿಯಲ್ಲಿದೆ. ಪೋಡಿ ದುರಸ್ತಿ, ಫಾರಂ 57 ಹೀಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ತಂತ್ರಜ್ಞಾನದ ಸಮರ್ಪಕ ಅಳವಡಿಕೆಯಿಂದ ಖಾಸಗಿ ವಲಯದಲ್ಲಿ ಕೆಲಸಕಾರ್ಯಗಳು ವೇಗ ಪಡೆದಿರುವ ಈ ದಿನಮಾನದಲ್ಲಿ, ಸರ್ಕಾರಿ ಇಲಾಖೆಗಳು ಸಹ ಮುಂದಡಿ ಇಡುವುದು ಅನಿವಾರ್ಯ. ಇಲ್ಲವಾದಲ್ಲಿ ಕಾಲದ ಓಟದಲ್ಲಿ ಹಿಂದೆ ಬೀಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಲವು ಉಪಕ್ರಮಗಳನ್ನು ಕೈಗೆತ್ತಿಕೊಂಡಿರುವುದು ಗಮನಾರ್ಹ. ಸಚಿವ ಕೃಷ್ಣ ಬೈರೇಗೌಡ ಹಾಗೂ ಅವರ ಅಧಿಕಾರಿಗಳ ತಂಡದ ಕಾರ್ಯನಿರ್ವಹಣೆ ಜನರ ಗಮನಸೆಳೆದಿದೆ. ಜನರ ದೈನಂದಿನ ಜೀವನದ ಜೊತೆಗೆ ಹಾಸುಹೊಕ್ಕಾಗಿರುವ ಇಲಾಖೆಗಳಲ್ಲಿ ಕಂದಾಯ ಇಲಾಖೆ ಕೂಡ ಮುಂಚೂಣಿಯಲ್ಲಿದೆ. ಈ ಇಲಾಖೆಯಲ್ಲಿ ಕೆಲಸಕಾರ್ಯಗಳು ವಿಳಂಬ-ಸಮಸ್ಯೆ ಇಲ್ಲದೆ ನೆರವೇರಿದಲ್ಲಿ ಜನರಿಗೆ ಅನುಕೂಲವಾಗುತ್ತದೆ. ಹೊಸ ಹೊಸ ಯೋಜನೆಗಳ ಮೂಲಕ ಇಲಾಖೆ ಜನರಿಗೆ ನಿಕಟವಾಗುವ ಯತ್ನ ನಡೆಸಿದೆಯಾದರೂ, ಜಾರಿಹಂತದಲ್ಲಿನ ತೊಂದರೆಗಳು ಜನರನ್ನು ಹೈರಾಣಾಗಿಸಿರುವುದನ್ನು ಸಂಬಂಧಿಸಿದವರು ಉಪೇಕ್ಷಿಸಬಾರದು. ನೋಂದಣಿ ಪ್ರಕ್ರಿಯೆ, ಬೆಂಗಳೂರಿನಲ್ಲಿ ಇ-ಖಾತಾ ನೀಡುವಲ್ಲಿ ಎದುರಾಗಿರುವ ತೊಂದರೆಗಳನ್ನು ಇದಕ್ಕೆ ಉದಾಹರಿಸಬಹುದು. ಯಾವುದೇ ಯೋಜನೆ ಆರಂಭಿಕ ಹಂತದಲ್ಲಿಯೇ ನೂರಕ್ಕೆ ನೂರು ಸಮಸ್ಯೆಮುಕ್ತ ಎಂದಾಗುವುದು ಕಷ್ಟವಾದರೂ, ಅನುಭವದ ಆಧಾರದಲ್ಲಿ ಅದನ್ನು ತಕ್ಷಣ ಸರಿಪಡಿಸುವ ಕೆಲಸವಾಗಬೇಕು. ಅಲ್ಲದೆ, ಸೂಕ್ತ ತಯಾರಿಯೊಂದಿಗೆ, ಸಾಕಷ್ಟು ತಾಲೀಮು ನಡೆಸಿ, ಜಾರಿಮಾಡಬೇಕು. ಇಲ್ಲವಾದಲ್ಲಿ ಹೆಸರಿಗಷ್ಟೇ ಸುಧಾರಣೆ ಎಂಬಂತಾಗುವ ಅಪಾಯವಿರುತ್ತದೆ.