ಅತ್ಯಾಚಾರ ಆರೋಪಿಗಳ ಮೇಲೆ ಪೊಲೀಸರ ಎನ್​ಕೌಂಟರ್​ ಫೇಕ್​; ಇದ್ಯಾವ ಪ್ರಕರಣ?

Encounter 8 dec 19
Published on

ನವದೆಹಲಿ: ಅತ್ಯಾಚಾರ ಆರೋಪಿಗಳ ಮೇಲೆ ಪೊಲೀಸರು ನಡೆಸಿದ್ದ ಎನ್​ಕೌಂಟರ್​ ಫೇಕ್. ಹೀಗಾಗಿ ಆ ಪೊಲೀಸರ ಮೇಲೆ ಕೊಲೆ ಕೇಸು ದಾಖಲಿಸಬೇಕು ಎಂದು ಸುಪ್ರೀಂಕೋರ್ಟ್​ ನೇಮಕ ಮಾಡಿರುವ ಸಮಿತಿಯೊಂದು ಶಿಫಾರಸು ಮಾಡಿದೆ.

2019ರಲ್ಲಿ ಹೈದರಾಬಾದ್​ನಲ್ಲಿ ನಡೆದಿದ್ದ ಈ ಎನ್​ಕೌಂಟರ್ ಕುರಿತು ಇಂದು ಈ ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ ಹತ್ತು ಪೊಲೀಸರ ವಿರುದ್ಧ ಫೇಕ್​ ಎನ್​ಕೌಂಟರ್​ ಆರೋಪ ಹೊರಿಸಿರುವ ಸಮಿತಿ, ಆ ಎಲ್ಲ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಹೇಳಿದೆ.

ಆರೋಪಿಗಳು ತಮ್ಮ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದರು ಎಂದು ಪೊಲೀಸರು ಹೇಳಿರುವ ವಿಚಾರ ನಂಬಲರ್ಹವಾದುದಲ್ಲ. ಮಾತ್ರವಲ್ಲ, ಅವರ ಹೇಳಿಕೆಯನ್ನು ಸಮರ್ಥಿಸುವಂಥ ಸಾಕ್ಷ್ಯಗಳೂ ಇಲ್ಲ ಎಂದು ಸಮಿತಿ ತಿಳಿಸಿದೆ.

ಡಾಕ್ಟರ್​ ಆಗಿರುವ 27 ವರ್ಷದ ಯುವತಿಯೊಬ್ಬಳನ್ನು ಅಪಹರಿಸಿದ್ದ ಆರೋಪಿಗಳು ಹೈದರಾಬಾದ್​ನ ಶಂಷಾಬಾದ್​ನ ತೊಂಡುಪಲ್ಲಿ ಎಂಬಲ್ಲಿನ ಟೋಲ್ ಪ್ಲಾಜಾ ಬಳಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು. ಷಡ್​ನಗರ ಬಳಿಯ ಚಟನ್​ಪಲ್ಲಿ ಎಂಬಲ್ಲಿ ಶವ ಎಸೆದು ಸುಟ್ಟು ಹಾಕಿದ್ದರು.

ಈ ಸಂಬಂಧ ಮಹಮ್ಮದ್ ಆರಿಫ್, ಚಿಂಟಕುಂಟ ಚೆನ್ನಕೇಶವುಲು, ಜೋಲು ಶಿವ ಮತ್ತು ಜೊಲ್ಲು ನವೀನ್ ಎಂಬವರ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಆರೋಪ ದಾಖಲಿಸಿಕೊಳ್ಳಲಾಗಿತ್ತು. 2019ರ ನವೆಂಬರ್​ನಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿದ್ದು, ಡಿ. 6ರಂದು ನಡೆದ ಎನ್​ಕೌಂಟರ್​ನಲ್ಲಿ ಇವರೆಲ್ಲ ಸಾವಿಗೀಡಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net