ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣ ಒಂದಲ್ಲ ಎರಡಲ್ಲ..

suicide
Published on

ಹುಬ್ಬಳ್ಳಿ: ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೆ ಕಾರಣ ಒಂದಲ್ಲ ಎರಡಲ್ಲ ಎಂಬಂತಾಗಿದೆ. ಸಮಸ್ಯೆ ಜೊತೆಗೆ ಗೊಂದಲವೂ ಸೇರಿ ಕೊನೆಗೆ ಈ ವಿದ್ಯಾರ್ಥಿನಿ ಸಾವಿನ ಮೊರೆ ಹೋಗಿದ್ದಳು. ಹುಬ್ಬಳ್ಳಿಯ ಕಾರವಾರ ರಸ್ತೆಯ ಪೊಲೀಸ್​ ಕ್ವಾರ್ಟರ್ಸ್​ನಲ್ಲಿ ಈ ಆತ್ಮಹತ್ಯೆ ನಡೆದಿದೆ.

ಹೆಡ್​ ಕಾನ್​ಸ್ಟೆಬಲ್​​ ಮಲ್ಲಪ್ಪ ಬದಾಮಿ ಎಂಬುವರ ಪುತ್ರಿ ಕಾವ್ಯಾ ಬದಾಮಿ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಎಸ್​ಎಸ್​ಎಲ್​ಸಿಯಲ್ಲಿ ಹೆಚ್ಚು ಅಂಕ ಗಳಿಸಿದ್ದಳು. ಆದರೆ ಪಿಯುಸಿ ಪ್ರಥಮ ವರ್ಷದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು. ಹಾಗಾಗಿ, ಕಾಲೇಜು ಬದಲಾವಣೆ ಮಾಡಿದ್ದಳು.

ನಂತರ ಹೊಸ ಕಾಲೇಜು ಸರಿ ಇಲ್ಲ ಎಂದು ಮತ್ತೆ ಹಳೆಯ ಕಾಲೇಜಿಗೇ ಹೋಗಲು ಮುಂದಾಗಿದ್ದಳು. ಜತೆಗೆ ತನಗಿದ್ದ ಲೋ ಬಿಪಿ ಸಮಸ್ಯೆಯನ್ನು ಮನಸ್ಸಿಗೆ ಹಚ್ಚಿಕೊಂಡು ರೂಮ್​ನಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡಿದ್ದಳು. ಇದನ್ನು ಗಮನಿಸಿದ ಕುಟುಂಬದವರು ಕೂಡಲೇ ಈಕೆಯನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು ಎಂದು ಉಪನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net