

ನವದೆಹಲಿ: ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡಿದ ಬಳಿಕ ಅದರಲ್ಲಿ ಬಹಳಷ್ಟು ಬದಲಾವಣೆ ತಂದಿದ್ದಲ್ಲದೆ, ಕೊನೆಗೆ ಅದರ ಹೆಸರನ್ನು 'ಎಕ್ಸ್' ಎಂದು ಬದಲಾಯಿಸಿಬಿಟ್ಟರು. ಈ ಮಧ್ಯೆ ದುಡ್ಡು ಕೊಟ್ಟರೆ ಸಾಕು ಯಾರೂ ಬೇಕಾದರೂ ಬ್ಲೂ ಟಿಕ್ ಪಡೆಯಬಹುದು ಎಂದು ಅದನ್ನು ಖರೀದಿಗಿಟ್ಟರು. ಅರ್ಥಾತ್, ಸಬ್ಸ್ಕ್ರಿಪ್ಷನ್ ಇದ್ದವರಿಗಷ್ಟೇ ಬ್ಲೂ ಟಿಕ್ ಮತ್ತು ಇತರ ಹೆಚ್ಚುವರಿ ಸೌಲಭ್ಯ ಎಂದು ನಿಯಮ ಮಾಡಿದರು.
ಹೀಗೆ ಒಂದಾದ ಮೇಲೊಂದರಂತೆ ಎಕ್ಸ್ನಲ್ಲಿ ಹಲವು ಬದಲಾವಣೆ-ಸುಧಾರಣೆಗಳನ್ನು ಮಾಡುತ್ತ ಬಂದಿರುವ ಎಲಾನ್ ಮಸ್ಕ್, ಹಲವು ಕಮರ್ಷಿಯಲ್ ಪ್ಲ್ಯಾನ್ಗಳನ್ನು ಮಾಡುತ್ತಿದ್ದಾರೆ. ಅಂದರೆ, ಈಗಿರುವ ಮಾಮೂಲಿ ಸಬ್ಸ್ಕ್ರಿಪ್ಷನ್ನ ದರದ ಅರ್ಧಕ್ಕಿಂತಲೂ ಕಡಿಮೆ ದರದಲ್ಲಿ ಸಬ್ಸ್ಕ್ರಿಪ್ಷನ್ ಆಯ್ಕೆ ಕೊಟ್ಟಿದ್ದಾರೆ.
ಈ ಮೂಲಕ ಹೆಚ್ಚು ಮಂದಿ ಚಂದಾದಾರರನ್ನು ಹೊಂದುವ ಹಾಗೂ ಹೆಚ್ಚು ಆದಾಯ ಮಾಡಿಕೊಳ್ಳುವ ಗುರಿ ಹೊಂದಿರುವ ಎಲಾನ್ ಮಸ್ಕ್ ಸಬ್ಸ್ಕ್ರಿಪ್ಷನ್ ಸಂಬಂಧ ಹೆಚ್ಚುವರಿಯಾಗಿ ಎರಡು ಪ್ಲ್ಯಾನ್ಗಳನ್ನು ಪರಿಚಯಿಸಿದ್ದಾರೆ. ಅಂದರೆ ಈಗಾಗಲೇ ಇರುವ ಪ್ರೀಮಿಯಂ ಪ್ಲ್ಯಾನ್ ಜತೆಗೆ ಬೇಸಿಕ್ ಮತ್ತು ಪ್ರೀಮಿಯಂ ಪ್ಲಸ್ ಎಂಬ ಎರಡು ಸಬ್ಸ್ಕ್ರಿಪ್ಷನ್ ಪ್ಲ್ಯಾನ್ ತಂದಿದ್ದಾರೆ.
ಎಕ್ಸ್ನ ಎಂದಿನ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ತಿಂಗಳಿಗೆ 900 ರೂ. ಇದ್ದರೆ, ಎಲಾನ್ ಮಸ್ಕ್ ಪರಿಚಯಿಸಿರುವ ಹೊಸ ಬೇಸಿಕ್ ಸಬ್ಸ್ಕ್ರಿಪ್ಷನ್ ತಿಂಗಳಿಗೆ 390 ರೂಪಾಯಿ. ಹಾಗೇ ಪ್ರೀಮಿಯಂ ಪ್ಲಸ್ ತಿಂಗಳಿಗೆ 2,150 ರೂ. ಆಗಿದ್ದು, ಈ ಮೂರೂ ಪ್ಲ್ಯಾನ್ಗಳಲ್ಲಿ ಪ್ಲ್ಯಾನ್ಗೆ ತಕ್ಕಂತೆ ಸೌಲಭ್ಯಗಳಿವೆ.