

ಬೆಂಗಳೂರು: ಜನಸಂಖ್ಯೆ ಸಂಪತ್ತೋ ಸಮಸ್ಯೆಯೋ ಎಂಬುದು ಇನ್ನೂ ಚರ್ಚೆಯ ವಿಷಯವಾಗಿಯೇ ಉಳಿದಿದೆ ಹೊರತು, ಇದಮಿತ್ಥಂ ಎಂದು ಖಚಿತವಾಗಿ ಹೇಳುವುದು ಕಷ್ಟ ಎಂಬಂತಿದೆ. ಅದಾಗ್ಯೂ ಉದ್ಯಮಿ, ಸೋಷಿಯಲ್ ಮೀಡಿಯಾ ಆ್ಯಪ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಮಕ್ಕಳನ್ನು ಹೊಂದುವ ಕುರಿತು ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ.
ಇದೀಗ ಅವರು ಇನ್ನೊಮ್ಮೆ ಅದೇ ವಿಚಾರವಾಗಿ ಮಾತನಾಡಿದ್ದು, ಜನಸಂಖ್ಯೆ ಹೆಚ್ಚಾಗಬೇಕು, ಮಕ್ಕಳನ್ನು ಹೊಂದಲು ಹಿಂಜರಿಕೆ ಇರಬಾರದು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. 'ಮಕ್ಕಳನ್ನು ಹೊಂದುವುದೆಂದರೆ ಜಗತ್ತನ್ನು ಉಳಿಸಿದಂತೆ' ಎಂದು ಸೆಪ್ಟೆಂಬರ್ ತಿಂಗಳಲ್ಲಷ್ಟೇ ಹೇಳಿದ್ದ ಅವರು, ಈಗ ಇನ್ನೊಮ್ಮೆ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಕ್ಕಳನ್ನು ಹೊಂದುವುದನ್ನು ಪ್ರೋತ್ಸಾಹಿಸಬೇಕು, ಕೆಲವು ದೇಶಗಳಲ್ಲಿರುವಂತೆ ಮಕ್ಕಳನ್ನು ಹೊಂದಿದ್ದಕ್ಕೆ ದಂಡ ವಿಧಿಸಬಾರದು, ನಾವು ಮುಂದಿನ ಪೀಳಿಗೆಯ ಮನುಷ್ಯರನ್ನು ಸೃಷ್ಟಿಸಬೇಕು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಒಬ್ಬಳು ಗೆಳತಿ, ಮೂವರು ಪತ್ನಿಯರ ಜತೆಗೆ ಹತ್ತಕ್ಕೂ ಅಧಿಕ ಮಕ್ಕಳನ್ನು ಹೊಂದಿರುವ ಎಲಾನ್ ಮಸ್ಕ್, ಎಲ್ಲರೂ ಹೆಚ್ಚು ಮಕ್ಕಳನ್ನು ಹೊಂದಬೇಕು, ಜನಸಂಖ್ಯೆ ಹೆಚ್ಚಾಗಬೇಕು ಎಂಬ ಆಶಯವನ್ನು ಈಗಾಗಲೇ ಕೆಲವು ಸಲ ವ್ಯಕ್ತಪಡಿಸಿದ್ದರು. ಹೆಚ್ಚು ಮಕ್ಕಳು ಹುಟ್ಟುವ ಮೂಲಕ ಜನಸಂಖ್ಯೆ ಹೆಚ್ಚಾಗಬೇಕು ಎಂಬ ಆಶಯವನ್ನು ಅವರು ಇದೀಗ ಇನ್ನೊಮ್ಮೆ ವ್ಯಕ್ತಪಡಿಸಿದ್ದಾರೆ.