ಬೀಜಿಂಗ್: ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ. ಹೀಗೊಂದು ಮನವಿಯನ್ನು ಸ್ಪರ್ಮ್ ಬ್ಯಾಂಕ್ಗಳು ಮಾಡಿಕೊಳ್ಳುತ್ತಿವೆ. ಅಂದಹಾಗೆ ಈ ಥರದ ಮನವಿಯನ್ನು ಚೀನಾದಲ್ಲಿನ ಸ್ಪರ್ಮ್ ಬ್ಯಾಂಕ್ಗಳು ಅಲ್ಲಿನ ಕಾಲೇಜು ವಿದ್ಯಾರ್ಥಿಗಳಲ್ಲಿ ಮಾಡಿಕೊಂಡಿವೆ.
ಸ್ಪರ್ಮ್ ಬ್ಯಾಂಕ್ಗಳಿಂದ ಇಂಥದ್ದೊಂದು ಮನವಿ ಹೊರಬಿದ್ದ ಬಳಿಕ ಅಲ್ಲಿನ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ಟ್ರೆಂಡಿಂಗ್ ಆಗಲಾರಂಭಿಸಿದೆ. ದ ಯುನ್ನಾನ್ ಹ್ಯೂಮನ್ ಸ್ಪರ್ಮ್ ಬ್ಯಾಂಕ್ ಫೆ. 2ರಂದು ಇಂಥದ್ದೊಂದು ಮನವಿಯನ್ನು ಮೊದಲ ಸಲ ಮಾಡಿಕೊಂಡಿತ್ತು. ಬೆನ್ನಿಗೇ ಚೀನಾದ್ಯಾಂತ ಇರುವ ಇತರ ಸ್ಪರ್ಮ್ ಬ್ಯಾಂಕ್ಗಳೂ ಈ ಮನವಿಯನ್ನು ಮಾಡಿಕೊಂಡಿವೆ.
ಜನವರಿಯಲ್ಲಿ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಆಫ್ ಚೈನಾ ಬಿಡುಗಡೆ ಮಾಡಿದ ಅಂಕಿ-ಅಂಶದ ಪ್ರಕಾರ ದೇಶದ ಜನಸಂಖ್ಯೆಯಲ್ಲಿ ಕುಸಿತ ಕಂಡುಬಂದಿತ್ತು. ಇದು ಚೀನಾದ ಕಳೆದ 61 ವರ್ಷಗಳಲ್ಲೇ ಮೊದಲ ಬೆಳವಣಿಗೆಯಾಗಿದ್ದು, 2022ರಲ್ಲಿ 8.5 ಲಕ್ಷ ಜನಸಂಖ್ಯೆ ಕುಸಿತವಾಗಿತ್ತು. ಪ್ರಪ್ರಥಮ ಬಾರಿಗೆ ಹೀಗೆ ಜನಸಂಖ್ಯೆ ಕುಸಿತಗೊಂಡ ಹಿನ್ನೆಲೆಯಲ್ಲಿ ವೀರ್ಯಾಣುಗಳನ್ನು ದಾನ ಮಾಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.
ಪದವಿ ಪಡೆಯುತ್ತಿರುವವರು ಅಥವಾ ಪದವೀಧರರು ಈ ವೀರ್ಯಾಣು ದಾನ ಮಾಡಬಹುದಾಗಿದೆ. 20ರಿಂದ 40ರ ವಯೋಮಾನದ, 165 ಸೆಂ.ಮೀ.ಗಿಂತ ಎತ್ತರವಿರುವ ಆರೋಗ್ಯವಂತ ಯುವಕರಿಂದ ವೀರ್ಯಾಣು ಅಪೇಕ್ಷಿಸಲಾಗಿದ್ದು, ಅಂಥ ಅರ್ಹರಿಂದ 8ರಿಂದ 12 ಸಲ ವೀರ್ಯಾಣು ಪಡೆಯಲಾಗುತ್ತದೆ. ವೀರ್ಯಾಣು ದಾನಿಗಳಿಗೆ ಸಬ್ಸಿಡಿಯನ್ನೂ ನೀಡಲಾಗುತ್ತಿದೆ ಎನ್ನಲಾಗಿದೆ.
ಜನಸಂಖ್ಯೆ ಸುಧಾರಿಸಲು ಚೀನಾ 2015ರಲ್ಲಿ ಒಂದೇ ಮಗು ನೀತಿಯನ್ನು ಹಿಂಪಡೆದು, ಇಬ್ಬರು ಮಕ್ಕಳನ್ನು ಪಡೆಯಲು ಅವಕಾಶ ಕಲ್ಪಿಸಿತ್ತು. ನಂತರ 2021ರಲ್ಲಿ ದಂಪತಿ ಮೂವರು ಮಕ್ಕಳನ್ನು ಪಡೆಯಬಹುದು ಎಂದೂ ಬದಲಾವಣೆ ತಂದಿತು. ಅದಾಗ್ಯೂ ಜನಸಂಖ್ಯೆ ಸುಧಾರಿಸದ್ದರಿಂದ ಮತ್ತು ಇದೀಗ ಪ್ರಥಮ ಬಾರಿಗೆ ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದರಿಂದ ವೀರ್ಯಾಣು ದಾನ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ನಿನ್ನೆ ಮೊಮ್ಮಗ, ಇಂದು ಅಜ್ಜ ಹುಲಿದಾಳಿಗೆ ಬಲಿ; ಇಬ್ಬರನ್ನು ಕೊಂದ ಹುಲಿಯನ್ನು ಶೂಟ್ ಮಾಡಿ ಸಾಯಿಸಿ ಎಂದು ಪಟ್ಟುಹಿಡಿದ ಜನರು
ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು