More

    ದುಷ್ಕರ್ಮಿಗಳಿಗೆ, ಭಯೋತ್ಪಾದಕರಿಗೆ ಕಾಂಗ್ರೆಸ್​ನ ಹುಮ್ಮಸ್ಸು

    ಕಿಶೋರಕುಮಾರ್​ ಕುಂದಾಪುರ ಆರೋಪ — ಹುಬ್ಬಳ್ಳಿ ಘಟನೆ ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ರಾಜ್ಯದಲ್ಲಿರುವ ಕೊಲೆಗೆಡುಕರಿಗೆ , ದುಷ್ಕರ್ಮಿಗಳಿಗೆ, ಹಾಗೂ ಭಯೋತ್ಪಾದಕರಿಗೆ ಕಾಂಗ್ರೆಸ್​ ಸರ್ಕಾರದ ಆಡಳಿತ ಬಂದ ಕೂಡಲೇ ಹುಮ್ಮಸ್ಸು ಬರುತ್ತದೆ. ಕಾಂಗ್ರೆಸ್​ ಸರ್ಕಾರದಿಂದ ಹೆಣ್ಣುಮಕ್ಕಳಿಗೆ, ಮಹಿಳೆಯರಿಗೆ ಎಂದಿಗೂ ರಕ್ಷಣೆ ಸಿಗದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ಕುಂದಾಪುರ ಆರೋಪಿಸಿದರು.

    ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

    ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನೇಜಾರುವಿನಲ್ಲಿ ನಾಲ್ವರ ಹತ್ಯೆ ನಡೆಯಿತು, ರಾಮೇಶ್ವರಂ ಕೆೆಯಲ್ಲಿ ಸ್ಫೋಟ, ಆಟೋದಲ್ಲಿ ಕುಕ್ಕರ್​ ಬಾಂಬ್​ ಸ್ಫೋಟ ಆಗುತ್ತದೆ. ಇದೀಗ ಹುಬ್ಬಳ್ಳಿಯ ಕಾಲೇಜಿನಲ್ಲಿ ಅನ್ಯ ಕೋಮಿನ ಯುವಕನೋರ್ವ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿದ್ದಾನೆ. ಸಿಎಂ ಸಿದ್ದರಾಮಯ್ಯ ಅವರು ಅದು ವೈಯಕ್ತಿಕ ಪ್ರಕರಣ, ಪ್ರೇಮ ಪ್ರಕರಣ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿಎಂ ಸ್ಥಾನಕ್ಕೆರಾಜೀನಾಮೆ ನೀಡಿ

    ಉಪಾಧ್ಯಕ್ಷ ಕಿರಣಕುಮಾರ್​ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಕೇವಲ ಒಂದು ಕೋಮಿನ ಓಲೈಕೆಯಲ್ಲಿ ತೊಡಗಿದೆ ಎನ್ನುವುದಕ್ಕೆ ಹುಬ್ಬಳ್ಳಿ ಘಟನೆಯೇ ಸಾಕ್ಷಿ. ಸಿದ್ದರಾಮಯ್ಯನವರೇ ನಿಮ್ಮ ಪುತ್ರ ಅಸಹಜ ಸಾವು ಕಂಡಾಗ ಇಡೀ ರಾಜ್ಯ ನಿಮಗೆ ಸಾಂತ್ವನ ಹೇಳಿದೆ. ಆದರೆ, ಯಾರದೋ ಮನೆಯ ಯುವತಿಯ ಹತ್ಯೆ ನಡೆದರೆ ಅದನ್ನು ಪ್ರೇಮ ಪ್ರಕರಣ ಎನ್ನುತ್ತೀರಿ. ತಂದೆಯ ಸ್ಥಾನದಲ್ಲಿ ನಿಂತು ಹುಬ್ಬಳ್ಳಿಯ ಹಿರೇಮಠ ಕುಟುಂಬಕ್ಕೆ ಸಾಂತ್ವ ಹೇಳದ ನೀವೂ ಓರ್ವ ಮುಖ್ಯಮಂತ್ರಿಯೇ? ಹುಬ್ಬಳ್ಳಿಯ ಘಟನೆಯ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದರು.

    ಪ್ರತಿಭಟನೆಯಲ್ಲಿ ಶಾಸಕ ಯಶ್​ಪಾಲ್​ ಸುವರ್ಣ, ಕುಯಿಲಾಡಿ ಸುರೇಶ್​ ನಾಯಕ್​, ದಿನಕರ್​ ಶೆಟ್ಟಿ ಹೆರ್ಗ, ಪ್ರಕಾಶ್​ ಶೆಟ್ಟಿ ಪಾದೆಬೆಟ್ಟು, ರಾಜೇಶ್​ ಕೆ., ಸುಪ್ರಸಾದ ಶೆಟ್ಟಿ, ಪ್ರಥ್ವಿರಾಜ್​ ಶೆಟ್ಟಿ, ಅಲ್ವಿನ್​ ಡಿಸೋಜಾ, ಶ್ರೀಕಾಂತ್​ ನಾಯ್ಕ, ಶೇಖ್ ಆಸೀಫ್, ಶಿವಕುಮಾರ್​ ಅಂಬಲಪಾಡಿ, ಶ್ರೀಕಾಂತ್​ ಕಾಮತ್​, ವೀಣಾ ಶೆಟ್ಟಿ, ರೇಶ್ಮಾ ಶೆಟ್ಟಿ, ಮಂಜುಳಾ ಪ್ರಸಾದ್​, ನಳಿನಿ ಪಿ. ರಾವ್​, ರಶ್ಮಿತಾ ಇನ್ನಿತರ ಪದಾಧಿಕಾರಿಗಳು ಇದ್ದರು.

    ಮಹೇಶ್​ ಠಾಕೂರ್​ ವಂದಿಸಿದರು. ಸತ್ಯಾನಂದ ನಾಯ್ಕ್​ ನಿರೂಪಿಸಿದರು.

    ರಾಜ್ಯದಲ್ಲಿ ಬ್ರಿಟಿಷ್​ ಆಡಳಿತ

    ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್​ ಶೆಟ್ಟಿ ಮಾತನಾಡಿ, ಮುಸ್ಲೀಂ ಲೀಗ್​ ದೊಡ್ಡದೋ ಅಥವಾ ಕಾಂಗ್ರೆಸ್​ ದೊಡ್ಡದೋ ಎಂದು ಅವರಿಬ್ಬರಲ್ಲಿ ಪೈಪೋಟಿ ನಡೆದಿದೆ. ಆ ಪೈಪೋಟಿಯ ಪರಿಣಾಮದಿಂದಾಗಿಯೇ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ ಕಾರ್ಪೋರೇಟರ್​ನ ಪುತ್ರಿಯ ಹತ್ಯೆ ನಡೆದಿದೆ. ಸರ್ಕಾರ ರಾಜ್ಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ವರ್ತಿಸಿದಂತೆ ಈಗಿನ ಕಾಂಗ್ರೆಸ್​ ಸರ್ಕಾರ ವರ್ತಿಸುತ್ತಿದೆ. ಹುಬ್ಬಳ್ಳಿಯ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಬಿಜೆಪಿ ತನ್ನ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಕೆ ನೀಡಿದರು.

    ಮಹಿಳೆಯರಿಗೆ ರಕ್ಷಣೆ ಕೊಡಬೇಕಿದ್ದ ಕಾಂಗ್ರೆಸ್​ ಸರ್ಕಾರ ನಿದ್ದೆ ಮಾಡುತ್ತಿದೆ. ಹೆಣ್ಣನ್ನು ಪೂಜಿಸುವ ನಾಡಿನಲ್ಲೇ ಹೆಣ್ಣಿನ ಹತ್ಯೆ ಮಾಡಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್​ನ ಇಬ್ಬಗೆಯ ನೀತಿಯೇ ಕಾರಣ. ಈ ಸರ್ಕಾರದಿಂದ ಮಹಿಳೆಯರಿಗೆ ರಕ್ಷಣೆ ಸಿಗದು. ಹುಬ್ಬಳ್ಳಿಯ ವಿದ್ಯಾರ್ಥಿನಿಯ ಹತ್ಯೆ ಮಾಡಿದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಲೇಬೇಕು.
    ಶ್ಯಾಮಲಾ ಕುಂದರ್​
    ಮಾಜಿ ಸದಸ್ಯೆ, ರಾಷ್ಟ್ರೀಯ ಮಹಿಳಾ ಆಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts