ಕೀ ಹಾಕಿ ಸ್ಟಾರ್ಟ್ ಮಾಡಿದ್ದೇ ತಡ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್!

Untitled design - 2023-10-22T131835.378
Published on

ಮಂಡ್ಯ: ನಿಲ್ಲಿಸಿದ್ದ ಎಲೆಕ್ಟ್ರಿಕ್​ ಸ್ಕೂಟರ್​ ಅನ್ನು ಕೀ ಹಾಕೀ ಸ್ಟಾರ್ಟ್​ ಮಾಡಿದ್ದೇ ತಡ ದಿಢೀರ್​ ಬೆಂಕಿ ಕಾಣಿಸಿಕೊಂಡಿದ್ದು, ಅನಾಹುತ ತಪ್ಪಿಸುವಷ್ಟರಲ್ಲೇ ಸ್ಕೂಟರ್​ ಅಗ್ನಿಯ ಕೆನ್ನಾಲಿಗೆಗೆ ತುತ್ತಾದ ಘಟನೆ ಮಂಡ್ಯ ತಾಲೂಕಿನ ಮುತ್ತೆಗೆರೆ ಗ್ರಾಮದಲ್ಲಿ ಸಂಭವಿಸಿದೆ.

ಎಂದಿನಂತೆ ಕೀ ಆನ್​ ಮಾಡಿ ಸ್ಟಾರ್ಟ್​​ ಮಾಡುವಾಗ ಸ್ಕೂಟರ್​ನಲ್ಲಿ ದಿಢೀರ್​​ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಯನ್ನು ನಂದಿಸುವ ಪ್ರಯತ್ನಕ್ಕೆ ಮುಂದಾದರೂ ಕೂಡ ಇದು ಫಲಿಸಲಿಲ್ಲ. ಅಗ್ನಿಯ ಅವಘಡಕ್ಕೆ ಎಲೆಕ್ಟ್ರಿಕ್​ ಸ್ಕೂಟರ್​ ಕ್ಷಣಾರ್ಧದಲ್ಲಿ ಧಗಧಗನೆ ಉರಿದು ಹೋಗಿದೆ. ಸುಟ್ಟು ಹೋದ ಎಲೆಕ್ಟ್ರಿಕ್ ಸ್ಕೂಟರ್ ಚಂದ್ರಶೇಖರ್ ಎಂಬುವರಿಗೆ ಸೇರಿದ್ದು ಎಂದು ಹೇಳಲಾಗಿದೆ.

ಮನೆಯಿಂದ ಬಸರಾಳು ಗ್ರಾಮಕ್ಕೆ ತೆರಳಲು ಸ್ಕೂಟರ್ ಸ್ಟಾರ್ಟ್ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಒಕಿನೊವಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾಗಿದ್ದು, ಘಟನೆಯನ್ನು ಪ್ರತ್ಯಕ್ಷ ಕಂಡ ಗ್ರಾಮಸ್ಥರು ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಈ ಪ್ರಕರಣ ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net