ಚಕ್ಕಂದ ಬೇಡವೆಂದ ತಾಯಿಯನ್ನು ಬಾಯ್ ಫ್ರೆಂಡ್ ಜೊತೆ ಸೇರಿ ಕೊಂದ ಟೀನೇಜ್​ ಪುತ್ರಿ!

rajamandri crime
Published on

ಹೈದರಾಬಾದ್​: ಓದುವ ವಯಸ್ಸಿನಲ್ಲಿ ಚಕ್ಕಂದ ಬೇಡ ಎಂದು ಬುದ್ದಿವಾದ ಹೇಳಿದ ತಾಯಿಯನ್ನು

ಟೀನೇಜ್​ ಮಗಳು ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಹತ್ಯೆಗೈದಿರುವ ದುಷ್ಕೃತ್ಯ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನ ಕಂಬಳಪೇಟೆಯಲ್ಲಿ ನಡೆದಿದ್ದು, ಸಂಚಲನ ಮೂಡಿಸಿದೆ.

ನಿವೃತ್ತ ಶಿಕ್ಷಕಿ ಮಾರ್ಗರೇಟ್ ಜೂಲಿಯಾನ(63) ಮಕ್ಕಳಿಲ್ಲದ ಕಾರಣ 13 ವರ್ಷದ ಹಿಂದೆ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಜೂಲಿಯಾನಾ ಅವರ ಪತಿ ನಾಗೇಶ್ವರ ರಾವ್ ಎಫ್‌ಸಿಐನಲ್ಲಿ ವ್ಯವಸ್ಥಾಪಕರಾಗಿದ್ದು, ನಿವೃತ್ತಿಯಾದ ಎರಡು ವರ್ಷದ ನಂತರ ಅನಾರೋಗ್ಯದಿಂದ ನಿಧನರಾದರು.

ಮಾರ್ಗರೇಟ್ ಜೂಲಿಯಾನ ತನ್ನ ದತ್ತು ಪುತ್ರಿಯೊಂದಿಗೆ ಕಂಬಳಪೇಟೆಯಲ್ಲಿ ವಾಸವಾಗಿದ್ದರು. ಪುತ್ರಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದರು. ಕೋಟ್ಯಂತರ ಆಸ್ತಿಯ ವಾರಸುದಾರಳಾದ್ದರಿಂದ ಹುಡುಗಿ ಕೇಳಿದ್ದನ್ನೆಲ್ಲಾ ಕೊಡಿಸಿಕೊಡುತ್ತಿದ್ದರು. 13 ನೇ ವಯಸ್ಸಿನ ಹುಡುಗಿ 19 ವರ್ಷದ ಹುಡುಗನನ್ನು ಪ್ರೀತಿಸುತ್ತಿದ್ದಳು. ಸಾಕಿದ ತಾಯಿಗೆ ಗೊತ್ತಾಗಿ ಛೀಮಾರಿ ಹಾಕಿದರು. ಓದು ಬಿಟ್ಟು ಸರಸ, ಸಲ್ಲಾಪಕ್ಕಾಗಿ ಭವಿಷ್ಯ ಹಾಳು ಮಾಡಿಕೊಳ್ಳಬೇಡ ಎಂದು ಬುದ್ಧಿವಾದ ಹೇಳಿದ್ದರು. ಆದರೆ ಮಗಳಿಗೆ ಇದು ರುಚಿಸಲಿಲ್ಲ. ಕಡೆಗೆ ತನ್ನ ಗೆಳೆಯನೊಂದಿಗೆ ಸೇರಿ ಸಂಚು ರೂಪಿಸಿ ಇನ್ನಿಬ್ಬರು ಯುವಕರ ನೆರವಿನಿಂದ ಜೂಲಿಯಾನರನ್ನು ಕೊಂದಿದ್ದಾಳೆ.

ಹುಡುಗಿ ಕೆಟ್ಟ ಚಟಗಳಿಗೆ ಪ್ರಭಾವಿತಳಾಗಿದ್ದಳು. ಇದರಿಂದ ತಾಯಿ ಮತ್ತು ಮಗಳ ನಡುವೆ ಜಗಳ ಶುರುವಾಗಿದೆ. ಅಮ್ಮನ ಮಾತುಗಳನ್ನೆಲ್ಲ ತನ್ನ ಮೇಲೆ ದ್ವೇಷದಿಂದ ಹೇಳುತ್ತಿದ್ದಾರೆ ಎಂದು ಹುಡುಗಿಗೆ ಅನಿಸಿತು. ಪ್ರಿಯಕರ ಹಾಗೂ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net