

ಚಿಕ್ಕೋಡಿ: ತುಂಬಿದ ಸಭೆಯಲ್ಲಿ ಮಹಿಳಾ ನರ್ಸ್ಗಳ ಬಗ್ಗೆ ಮಾತನಾಡುವ ಮೂಲಕ ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸದಾ ಸ್ತ್ರೀ ಗೌರವದ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರದೇ ಪಕ್ಷದ ಶಾಸಕ, ಹುಡುಗಿಯರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದು ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.
ನಿನ್ನೆ ತಡರಾತ್ರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲಿ ನಡೆದ ದಸರಾ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರಾಜು ಕಾಗೆ, "ಚೆಂದದ ನರ್ಸ್‌ಗಳು ನಂಗೆ ಅಜ್ಜಾ ಎನ್ನುವುದು ತ್ರಾಸ್ ಆಗೇತಿ" ಎಂದು ಹೇಳುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
ಅಥಣಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಉದ್ದೇಶಿಸಿ ಮಾತನಾಡುವಾಗ, ನನಗೆ ಲೀವರ್ ಆಪರೇಷನ್ ಆಗಿತ್ತು. ಆಗ ಡಾಕ್ಟರ್ ಬಂದು ಪದೇಪದೆ ಆರಾಮಾ ಆಗಿದೆಯಾ ಎಂದು ಕೇಳುತ್ತಿದ್ದರು. ಡಾಕ್ಟರ್ ಬಂದು ಕೇಳಿದ್ದು ಏನು ತ್ರಾಸ್ ಆಗ್ತಿರಲಿಲ್ಲ. ಆದರೆ, ಅಲ್ಲಿನ ಚೆಂದ ಚೆಂದ ನರ್ಸ್‌ಗಳು ಬಂದು ನಂಗೆ ಅಜ್ಜಾ ಅನ್ನುತ್ತಿದ್ದಿದ್ದು ನೋವಾಗ್ತಿತ್ತು ಎಂದರು.
ವೇದಿಕೆಯಲ್ಲೆ ಶಾಸಕ ಲಕ್ಷ್ಮಣ ಸವದಿ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕೂಡ ರಾಜು ಕಾಗೆ ಅವರ ಮಾತಿಗೆ ನಕ್ಕು ಸುಮ್ಮನಾದರು. ಸಾರ್ವಜನಿಕ ಜೀವನದಲ್ಲಿರುವವರಿಗೆ ಸಭ್ಯತೆಯ ಮಾತುಗಳು ಮುಖ್ಯ ಎಂದು ಸಾರ್ವಜನಿಕರ ಆಕ್ರೋಶ ಹೊರಹಾಕಿದ್ದಾರೆ. ಈ ರೀತಿಯ ಮಾತುಗಳಿಂದ ಸಮಾಜಕ್ಕೆ ಶಾಸಕರು ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.