ವಿಧಾನಸಭಾ ಚುನಾವಣೆ : ಕೋ-ವಿನ್ ಸರ್ಟಿಫಿಕೇಟಲ್ಲಿ ಮೋದಿ ಫೋಟೋ ಮರೆ

cowin
Published on

ನವದೆಹಲಿ: ದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಪ್ರದೇಶಗಳಲ್ಲಿ ಕರೊನಾ ಲಸಿಕೆ ಪಡೆದವರಿಗೆ ನೀಡಲಾಗುವ ಸರ್ಟಿಫಿಕೇಟ್​​ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇರುವುದಿಲ್ಲ. ಚುನಾವಣಾ ಆಯೋಗ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ ಕೋ-ವಿನ್ ಪೋರ್ಟಲ್​ಗೆ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ.

ಚುನಾವಣೆ ನಡೆಯಲಿರುವ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ಕೋ-ವಿನ್ ಮೂಲಕ ನೀಡಲಾಗುವ ಪ್ರಮಾಣ ಪತ್ರಗಳಲ್ಲಿ ಪ್ರಧಾನಿ ಫೋಟೋಅನ್ನು ಮರೆಮಾಡಲಾಗುವುದು. ಇದಕ್ಕಾಗಿ ಅಗತ್ಯ ಫಿಲ್ಟರ್​ಗಳನ್ನು ಕೋ-ವಿನ್ ಪೋರ್ಟಲ್​ನಲ್ಲಿ ಅಳವಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಚುನಾವಣೆಯಲ್ಲಿ ಪ್ರಮುಖ ಸ್ಪರ್ಧಿಯಾದ ಬಿಜೆಪಿಯ ಸ್ಟಾರ್ ಕಾಂಪೇನರ್​ ಆದ ಮೋದಿ ಅವರ ಚಿತ್ರವು ಕರೊನಾ ಫಲಾನುಭವಿಗಳಿಗೆ ನೀಡುವ ಸರ್ಟಿಫಿಕೇಟ್​​ನಲ್ಲಿದ್ದರೆ ಅವರಿಗೆ ಅನಗತ್ಯ ಪ್ರಚಾರ ಸಿಗುತ್ತದೆ. ಆದ್ದರಿಂದ ಇದು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಈ ಮುನ್ನ ಟಿಎಂಸಿ ದೂರು ನೀಡಿತ್ತು.

ಈ ದೂರನ್ನು ಪುರಸ್ಕರಿಸಿದ್ದ ಚುನಾವಣಾ ಆಯೋಗವು ಚುನಾವಣೆ ನಡೆಯುತ್ತಿರುವ ಪ್ರದೇಶಗಳಲ್ಲಿ ಕೋ-ವಿನ್ ಸರ್ಟಿಫಿಕೇಟ್​ಗಳಲ್ಲಿ ಮೋದಿ ಫೋಟೋ ಬಳಸುವುದನ್ನು ನಿಲ್ಲಿಸಲು ಮಾರ್ಚ್​ 6 ರಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದೀಗ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net