

ನವದೆಹಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಕಸರತ್ತು ಆರಂಭವಾಗಿದೆ. ಜೆಪಿ ನಡ್ಡಾ ಸ್ಥಾನಕ್ಕೆ ಡಿಸೆಂಬರ್ ಅಂತ್ಯದೊಳಗೆ ನೂತನ ನಾಯಕರ ಆಯ್ಕೆ ಪೂರ್ಣಗೊಳ್ಳಲಾಗುವುದು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಜೆಪಿ ನಡ್ಡಾ ಅವರ ಅಧಿಕಾರಾವಧಿ ಮುಗಿದಿದ್ದರೂ, ಚುನಾವಣೆ ಹಿನ್ನೆಲೆಯಲ್ಲಿ ಕಳೆದ ತಿಂಗಳವರೆಗೆ ಅವಧಿ ವಿಸ್ತರಣೆ ಮಾಡಲಾಗಿತ್ತು. ಅದೂ ಮುಗಿದ ಬಳಿಕ ನೂತನ ಅಧ್ಯಕ್ಷೀಯ ಚುನಾವಣೆಗೆ ಕಸರತ್ತು ಆರಂಭವಾಯಿತು. ಈ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯು ಆಗಸ್ಟ್ 1 ರಂದು ಆರಂಭಿಕ ಸದಸ್ಯತ್ವ ನೋಂದಣಿಯೊಂದಿಗೆ ಪ್ರಾರಂಭವಾಗಿ ಸೆಪ್ಟೆಂಬರ್ 15 ರವರೆಗೆ ಮುಂದುವರಿಯುತ್ತದೆ.
ಸಕ್ರಿಯ ಸದಸ್ಯತ್ವ ಪ್ರಕ್ರಿಯೆಯು ಸೆಪ್ಟೆಂಬರ್ 16 ರಿಂದ 30 ರವರೆಗೆ ಮುಂದುವರಿಯುತ್ತದೆ. ಬಿಜೆಪಿಯ ನಿಯಮಗಳ ಪ್ರಕಾರ, ಪ್ರತಿಯೊಬ್ಬ ಸದಸ್ಯರು ಒಂಬತ್ತು ವರ್ಷಗಳಿಗೊಮ್ಮೆ ಸದಸ್ಯತ್ವವನ್ನು ನವೀಕರಿಸಬೇಕು. ಈ ವರ್ಷ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ನವೀಕರಿಸಬೇಕಾಗಿದೆ. ಪಕ್ಷದ ಮಂಡಲ ಅಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರ ಆಯ್ಕೆ ನವೆಂಬರ್ 1-15 ಮತ್ತು ನವೆಂಬರ್ 16-30 ರವರೆಗೆ ನಡೆಯಲಿದೆ. ಅಂದು ನೂತನ ರಾಜ್ಯ ಮತ್ತು ರಾಷ್ಟ್ರೀಯ ಸಮಿತಿಗಳನ್ನು ಆಯ್ಕೆ ಮಾಡಲಾಗುವುದು. ಡಿಸೆಂಬರ್ 1 ರಂದು ರಾಜ್ಯಾಧ್ಯಕ್ಷರ ಚುನಾವಣೆ ಆರಂಭವಾಗಲಿದೆ.
ಅರ್ಧದಷ್ಟು ರಾಜ್ಯಗಳ ಅಧ್ಯಕ್ಷರ ನೇಮಕ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ಮುಖ್ಯಸ್ಥರ ಆಯ್ಕೆಗೆ ಅಧಿಕೃತ ಪ್ರಕ್ರಿಯೆ ಪ್ರಕಟವಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮ್ಯಾಜಿಕ್ ನಂಬರ್ (272) ಸಾಧಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸಾಂಸ್ಥಿಕ ಚುನಾವಣೆ ಬಿಜೆಪಿಗೆ ನಿರ್ಣಾಯಕ ಎನಿಸಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಮೋದಿ ಅವರು ನಡ್ಡಾ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದು,ರಾಜ್ಯಸಭೆ ನಾಯಕರಾಗಿರುವುದು ತಿಳಿದ ಸಂಗತಿಯೇ.