ಕಠ್ಮಂಡು: ನೇಪಾಳದ ನೂತನ ಪ್ರಧಾನಿಯಾಗಿ ಕೆ.ಪಿ.ಶರ್ಮಾ ಓಲಿ (72) ಆಯ್ಕೆಯಾಗಿದ್ದಾರೆ. ಎರಡು ಪಕ್ಷಗಳ ಒಪ್ಪಂದದಂತೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಓಲಿ ಅಧಿಕಾರಾವಧಿ 18 ತಿಂಗಳದ್ದಾಗಿದೆ.
ಇದನ್ನೂ ಓದಿ: 30 ವರ್ಷದ ನಂತರ ಜಮ್ಮುವಿನಲ್ಲಿ ತೆರೆದ ದೇವಾಲಯ.. ಮುಸಲ್ಮಾನರ ಸಂತಸ!
ಚೀನಾದ ಸಹಾನುಭೂತಿ ಹೊಂದಿರುವ ಓಲಿ ನೇಪಾಳದ ಪ್ರಧಾನಿಯಾಗುತ್ತಿರುವುದು ಇದು ನಾಲ್ಕನೇ ಬಾರಿ. ಪುಷ್ಪ ಕಮಲ್ ದಹಲ್ ಪ್ರಚಂಡ ನೇತೃತ್ವದ ಸರ್ಕಾರದ ಮೇಲಿನ ಅವಿಶ್ವಾಸ ನಿರ್ಣಯವನ್ನು ಸಂಸತ್ತಿನಲ್ಲಿ ಶುಕ್ರವಾರ ಅಂಗೀಕರಿಸಲಾಯಿತು.
ನೇಪಾಳ ಸಂಸತ್ನ ಒಟ್ಟು 275 ಸ್ಥಾನಗಳಲ್ಲಿ 194 ಸದಸ್ಯರು ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿದರು. ಪ್ರಚಂಡ ನಾಯಕತ್ವಕ್ಕೆ 66 ಮಂದಿ ಮಾತ್ರ ಮತ ಹಾಕಿದ್ದಾರೆ. ಇದರಿಂದ ಹೊಸ ಸರ್ಕಾರ ರಚನೆ ಅನಿವಾರ್ಯವಾಯಿತು.
ಕೆಪಿ ಶರ್ಮಾ ಓಲಿ ನೇತೃತ್ವದ ಸಿಪಿಎನ್-ಯುಎಂಎಲ್ ಮತ್ತು ನೇಪಾಳಿ ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಿದವು. ಓಲಿ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವ್ಬಾ ಮತ್ತು ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆಪಿ ಶರ್ಮಾ ಒಲಿ ಅವರು ಕಳೆದ ವಾರ ಸಮ್ಮಿಶ್ರ ಸರ್ಕಾರ ರಚನೆಗೆ ಒಪ್ಪಂದ ಮಾಡಿಕೊಂಡರು. ಅದರ ಪ್ರಕಾರ ಮುಂದಿನ 18 ತಿಂಗಳ ಕಾಲ ಒಲಿ ಪ್ರಧಾನಿಯಾಗಿರುತ್ತಾರೆ. ಆ ಬಳಿಕ ಸಂಸತ್ತಿನ ಅವಧಿ ಮುಗಿಯುವವರೆಗೂ ದೇವಬಾ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.