

ಶ್ರೀನಗರ: 30 ವರ್ಷದ ನಂತರ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಮಾ ಭಗವತಿ ದೇವಿ ದೇವಸ್ಥಾನವನ್ನು ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರ ಸಮ್ಮುಖದಲ್ಲಿ ಭಾನುವಾರ ತೆರೆಯಲಾಯಿತು.
ಜೀರ್ಣೋದ್ಧಾರದ ನಂತರ ದೇವಾಲಯವನ್ನು ತೆರೆಯಲಾಗಿದೆ. ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ದಿನವೇ ದೇವಿಯ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ರಾಜಸ್ಥಾನದಿಂದ ತರಲಾದ ಉಮಾದೇವಿ ಮೂರ್ತಿಯನ್ನು ವೇದಘೋಷ, ಮಂತ್ರ ಪಠಣದ ನಡುವೆ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಾಲಯದ ಜೀರ್ಣೋದ್ಧಾರದ ಬಗ್ಗೆ ಸ್ಥಳೀಯರು, ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರು ಸಂತಸ ವ್ಯಕ್ತಪಡಿಸಿದರು.
ದೇವಸ್ಥಾನದ ಅಭಿವೃದ್ಧಿಗೆ ಮತ್ತು ಕಾಶ್ಮೀರಿ ಪಂಡಿತರಿಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎನ್ನುತ್ತಾರೆ ಸ್ಥಳೀಯರಾದ ಗುಲ್ಜಾರ್ ಅಹಮದ್. 34 ವರ್ಷದ ನಂತರ ಮಂದಿರ ತೆರೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
1990ರಲ್ಲಿ ಧ್ವಂಸಗೊಂಡಿದ್ದ ಉಮಾ ಭಗವತಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದು ಕೇಂದ್ರ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.