ಉತ್ತರ ಕರ್ನಾಟಕಕ್ಕೆ ಚುನಾವಣಾ ಗಿಫ್ಟ್: ಇಂದು ಸಚಿವ ಸಂಪುಟದಲ್ಲಿ ಒಪ್ಪಿಗೆ ನಿರೀಕ್ಷೆ

Belagavi
Published on

ವಿಜಯವಾಣಿ ವಿಶೇಷ ಬೆಳಗಾವಿ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅಂದಾಜು 5 ರಿಂದ 6 ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಈ ಭಾಗದ ಜನರಲ್ಲಿ ವಿಶ್ವಾಸ ಮೂಡಿಸಲು ಹಾಗೂ ಚುನಾವಣೆಗೆ ಮತ ಕ್ರೋಡೀಕರಣಕ್ಕೆ ಸರ್ಕಾರ ಮುಂದಾಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಅದರಿಂದ ಹೆಚ್ಚೇನೂ ಉಪಯೋಗವಿಲ್ಲವೆಂಬ ಅನಿಸಿಕೆ ಈ ಭಾಗದ ಜನರಲ್ಲಿ ಮೂಡಲಾರಂಭಿಸಿದೆ. ವಿಧಾನಸಭಾ ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಇಂಥ ಭಾವನೆ ಬಲಿಯುವುದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅರಿವಿದೆ. ಸುವರ್ಣಸೌಧದಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಒಂದಷ್ಟು ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಅವುಗಳಿಗೆ ಪೂರಕ ಅಂದಾಜಿನಲ್ಲಿ ಹಣಕಾಸು ಹೊಂದಾಣಿಕೆ ಮಾಡಲಾಗುತ್ತದೆ. ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಕೆಲ ತೀರ್ವನಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹಿರಿಯ ಸಚಿವರೊಬ್ಬರು ಖಚಿತಪಡಿಸಿದ್ದಾರೆ.

ಏನೇನು ಯೋಜನೆ?: ಉತ್ತರ ಕರ್ನಾಟಕ ಎಂದರೆ ಅದು ನೀರಾವರಿ ಎಂಬ ಮಾತಿದೆ. ಈಗಲೂ ನೀರಾವರಿಗೆ ಆದ್ಯತೆ ನೀಡಲಾಗುತ್ತಿದೆ. ಬಾಕಿ ಉಳಿದಿರುವ ಕೆಲ ಯೋಜನೆ ಗಳಿಗೆ ಆದ್ಯತೆ ಮೇಲೆ ಅನುಮೋದನೆ ನೀಡಲಾಗುತ್ತಿದೆ. ಅದರ ಜತೆಗೆ ರಸ್ತೆ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು. ಬೆಳಗಾವಿ ಕಂದಾಯ ವಿಭಾಗ ಎಂದರೆ ಹಾವೇರಿಯಿಂದ ವಿಜಯಪುರ ತನಕ ಪ್ರತಿ ಜಿಲ್ಲೆಗೂ ಒಂದಿಲ್ಲೊಂದು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ.

ಏತ ನೀರಾವರಿ: ಗುತ್ತಿ ಬಸವಣ್ಣ, ರೇವಣಸಿದ್ದೇಶ್ವರ ಸೇರಿದಂತೆ ಎಂಟು ಏತ ನೀರಾವರಿಗಳಿಗೆ ಒಪ್ಪಿಗೆ ನೀಡಲು ಸಿದ್ಧತೆ ಮಾಡಲಾಗಿದೆ. ಬೆಳಗಾವಿ, ವಿಜಯಪುರ, ಧಾರವಾಡ ಜಿಲ್ಲೆಗಳಿಗೆ ಸೇರಿದ ಏತ ನೀರಾವರಿ ಯೋಜನೆಗಳಿವೆ. ಪ್ರತಿ ಯೋಜನೆಗೆ ಹತ್ತರಿಂದ 50 ಕೋಟಿ ರೂ.ಗಳ ತನಕ ವೆಚ್ಚವಾಗಲಿದೆ. ಇವು ರಾಜ್ಯಕ್ಕೆ ಮಂಜೂರಾಗಿರುವ ನೀರಿನ ಬಳಕೆ ಗೆ ಸಂಬಂಧಿಸಿದ ಯೋಜನೆಗಳಾಗಿವೆ.

ರಿಂಗ್ ರಸ್ತೆ: ಬೆಳಗಾವಿ ನಗರದಲ್ಲಿ ಹೆಚ್ಚುತ್ತಿರುವ ಸಂಚಾರದಟ್ಟಣೆ ತಗ್ಗಿಸಲು ರಿಂಗ್ ರಸ್ತೆ ನಿರ್ವಣಕ್ಕೆ ಸರ್ಕಾರ ಉದ್ದೇಶಿಸಿದೆ. ಗುರುವಾರದ ಸಂಪುಟ ಸಭೆಯಲ್ಲಿ ಇದಕ್ಕೂ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ. ಅದಕ್ಕೆ ಭೂಸ್ವಾಧೀನ ಹಾಗೂ ಕಾಮಗಾರಿಗೆ ಸೇರಿ ಒಂದೂ ವರೆಯಿಂದ ಎರಡು ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ರಸ್ತೆ ವಿಸ್ತರಣೆ: ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿ ಪಡಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲು ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದು ಅನಿವಾರ್ಯ ವಾಗಿದೆ. ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ ನಗರಕ್ಕೆ ಸಂರ್ಪಸುವ ರಸ್ತೆ ಕಿರಿದಾಗಿದೆ. ಇದರ ವಿಸ್ತರಣೆಗೆ ಒಪ್ಪಿಗೆ ನೀಡಲಾಗುತ್ತದೆ.

  • 5-6 ಸಾವಿರ ಕೋಟಿ ರೂ.ಯೋಜನೆ
  • ಬೆಳಗಾವಿಗೆ ರಿಂಗ್ ರಸ್ತೆ, ವಿಮಾನ ನಿಲ್ದಾಣ ರಸ್ತೆ ವಿಸ್ತರಣೆ ಕಾಮಗಾರಿ
  • ಎಂಟು ಏತ ನೀರಾವರಿ ಯೋಜನೆ
  • ವಿಜಯಪುರ ವಿಮಾನ ನಿಲ್ದಾಣಕ್ಕೆ ಇನ್ನಷ್ಟು ಸೌಲಭ್ಯ ಒದಗಿಸುವುದು
  • ಹಾವೇರಿಯಿಂದ ವಿಜಯಪುರದ ತನಕ ಜಿಲ್ಲೆಗಳಿಗೆ ವಿವಿಧ ಯೋಜನೆಗಳು

ವಿಜಯಪುರ ವಿಮಾನ ನಿಲ್ದಾಣ: ನಿರ್ಮಾಣ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣದ ಅಭಿವೃದ್ಧಿಗೂ ಕೆಲ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆರೋಗ್ಯ ಕೇಂದ್ರಗಳ ಅಭಿವೃದ್ಧಿಯ ಜತೆಗೆ ಬೆಳಗಾವಿಯಲ್ಲಿ ಸ್ಥಾಪಿಸುತ್ತಿರುವ ಕಿದ್ವಾಯಿ ಆಸ್ಪತ್ರೆಯನ್ನು ಆದಷ್ಟು ಬೇಗ ಆರಂಭಿಸಲು ಬೇಕಾದ ಅನುದಾನ ನೀಡುವುದು ಸೇರಿದಂತೆ ಹಲವು ಯೋಜನೆಗಳಿಗೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗುತ್ತದೆ. ಮುಂದಿನ ಬಜೆಟ್​ನಲ್ಲಿ ಜಾರಿಗೆ ಕೊಡುವಂತಹ ಕೆಲವು ಯೋಜನೆಗಳ ಬಗ್ಗೆಯೂ ಚರ್ಚೆ ಆಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net