

ಬೆಂಗಳೂರು: ವೋಕಲ್ ಫಾರ್ ಲೋಕಲ್ ಎಂಬುದು ಪ್ರತಿ ಭಾರತೀಯನ ಮಂತ್ರ ಆಗಬೇಕು ಎಂದು ಆತ್ಮನಿರ್ಭರ ಘೋಷಣೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು. ಒಂದು ಪಕ್ಕಾ ಲೋಕಲ್ ಕಥೆಯನ್ನೇ ಸಿನಿಮಾ ಮಾಡಿಕೊಂಡು 'ಕಾಂತಾರ'ದ ಮೂಲಕ ದೇಶಾದ್ಯಂತ ಜನಪ್ರಿಯತೆ ಪಡೆದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕೂಡ ತಮ್ಮ ಚಿತ್ರದ ಯಶಸ್ಸಿನ ಕುರಿತು ಇಂಥದ್ದೇ ಮಾತನ್ನು ಹೇಳಿದ್ದರು.
ಮೋರ್ ಲೋಕಲ್ ಈಸ್ ಮೋರ್ ಯುನಿವರ್ಸಲ್ ಎಂಬುದು ನನ್ನ ನಂಬಿಕೆ ಎಂದು 'ಕಾಂತಾರ'ದ ಯಶಸ್ಸಿನ ಕುರಿತು ಮಾತನಾಡಿದ ಹಲವೆಡೆ ರಿಷಬ್ ಶೆಟ್ಟಿ ಈ ಮಾತನ್ನು ಹೇಳಿದ್ದರು. ಇದೀಗ ಅಂಥದ್ದೇ ಒಂದು ವಿಚಾರ ಸಿನಿಮಾ ಥಿಯೇಟರ್ಗಳಲ್ಲಿನ ತಿಂಡಿಗೆ ಸಂಬಂಧಿಸಿದಂತೆ ಕೇಳಿಬಂದಿದೆ. ಫುಡ್ ವ್ಲಾಗರ್ ಆಗಿರುವ ಕೃಪಾಲ್ ಅಮನ್ನ ಇಂಥದ್ದೊಂದು ದನಿ ಎತ್ತಿದ್ದಾರೆ.
ಸಿನಿಮಾ ಥಿಯೇಟರ್ಗಳಲ್ಲಿ ಒಟ್ಟಾರೆ ಟನ್ಗಟ್ಟಲೆ ಪಾಪ್ಕಾರ್ನ್ ಮಾರಾಟ ಆಗುತ್ತದೆ ಎಂಬುದನ್ನು ಕೇಳಿದ್ದೇನೆ. ಸಿನಿಮಾ ಮಾಲ್ಗಳಲ್ಲಿ ಸಾಂಪ್ರದಾಯಿಕ ತಿನಿಸುಗಳೂ ಸಿಕ್ಕರೆ ಅದೆಷ್ಟು ಚೆನ್ನಾಗಿರುತ್ತಲ್ವಾ? ನಿಪ್ಪಟ್ಟು, ಬೆಣ್ಣೆ ಮುರುಕು.. ಈ ಥರ.. ನೀವು ಇನ್ಯಾವ ತಿಂಡಿ ಈ ಪಟ್ಟಿಗೆ ಸೇರಿಸುತ್ತೀರಿ? ಎಂದು ಅವರು ಮಾಡಿಕೊಂಡಿರುವ ಟ್ವೀಟ್ ಹಲವರ ಗಮನ ಸೆಳೆದಿದೆ. ಮಾತ್ರವಲ್ಲ, ಅವರ ಈ ಅಭಿಪ್ರಾಯಕ್ಕೆ ಲೈಕ್-ರಿಟ್ವೀಟ್ ಮಾಡುವ ಮೂಲಕ ಹಲವರು ದನಿಗೂಡಿಸಿದ್ದಾರೆ. ತಮ್ಮ ಅಭಿಪ್ರಾಯಕ್ಕೆ ಅತ್ಯಧಿಕ ಪ್ರತಿಕ್ರಿಯೆ ಬಂದಿದ್ದನ್ನು ಟ್ವಿಟರ್ ಇನ್ಸೈಟ್ಸ್ ಹಂಚಿಕೊಳ್ಳುವ ಮೂಲಕ ಅವರು ಬಹಿರಂಗಪಡಿಸಿದ್ದಾರೆ. ಒಟ್ಟಿನಲ್ಲಿ ಥಿಯೇಟರ್ಗಳಲ್ಲಿ ಸಾಂಪ್ರದಾಯಿಕ ತಿನಿಸುಗಳೂ ಸಿಗಬೇಕು ಎಂಬ ಬಗ್ಗೆ ಹಲವರು ಒಲವು ತೋರಿದ್ದಾರೆ.