ಉಂಗುರದಲ್ಲೇ ಸಿಂಹ-ಸಿಂಹಿಣಿ: ಹರಿಪ್ರಿಯಾಗೆ ವಸಿಷ್ಟ ಯಾಕಿಷ್ಟ?

Hariprriya
Published on

ಬೆಂಗಳೂರು: ತಮ್ಮ ಪ್ರೀತಿಯ ವಿಚಾರವನ್ನು ಬಹುತೇಕ ಗುಟ್ಟಾಗಿಯೇ ಇರಿಸಿಕೊಂಡು, ನಿಶ್ಚಿತಾರ್ಥವನ್ನೂ ತೀರಾ ಖಾಸಗಿ ಆಗಿಯೇ ನೆರವೇರಿಸಿಕೊಂಡಿದ್ದ ತಾರಾಜೋಡಿ ಹರಿಪ್ರಿಯಾ-ವಸಿಷ್ಟ ಸಿಂಹ ನಂತರ ತಮ್ಮ ಪ್ರೀತಿಯ ವಿಷಯವನ್ನು ವಿಶೇಷವಾಗಿ ಬಹಿರಂಗಪಡಿಸಿದ್ದರು.

ಅದಾದ ಮೇಲೆ ನಿಶ್ಚಿತಾರ್ಥದ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದ ಹರಿಪ್ರಿಯಾ, ಇದೀಗ ಇನ್ನೊಂದು ಸ್ವಾರಸ್ಯಕರ ಸಂಗತಿಯನ್ನೂ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ನಿಶ್ಚಿತಾರ್ಥಕ್ಕೆಂದು ತಾವಿಬ್ಬರೂ ವಿಶೇಷವಾಗಿ ವಿನ್ಯಾಸ ಮಾಡಿಸಿಕೊಂಡಿರುವ ಉಂಗುರದ ವಿಶೇಷತೆಯನ್ನು ಹಾಗೂ ಅದರ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.

ನಮ್ಮ ಪ್ರೇಮಪ್ರಸಂಗ ಒಂಚೂರು ವಿಶೇಷವೇ ಎಂದಿರುವ ಹರಿಪ್ರಿಯಾ, ವಸಿಷ್ಟ ಯಾಕಿಷ್ಟ ಎಂಬ ಬಗ್ಗೆಯೂ ಒಂದು ಕಾರಣ ತಿಳಿಸಿದ್ದಾರೆ. ನನ್ನ ಹೆಸರಿನ ಮುಂದೆ ಇರಬಹುದಾದಂಥ 'ಸಿಂಹ'ದ ಬಗ್ಗೆ ನನಗೆ ವಿಶೇಷ ಪ್ರೀತಿ ಎನ್ನುವ ಮೂಲಕ ಅವರು ಸದ್ಯದಲ್ಲೇ 'ಹರಿಪ್ರಿಯಾ ಸಿಂಹ' ಎಂದು ಹೆಸರು ಬದಲಿಸಿಕೊಳ್ಳುವ ಅಥವಾ ಅಧಿಕೃತವಾಗಿ ಹಾಗೆ ಕರೆಯಲ್ಪಡುವ ಕುರಿತು ಸುಳಿವು ನೀಡಿದ್ದಾರೆ.

ಮಾತ್ರವಲ್ಲ, ತಮ್ಮ ನಿಶ್ಚಿತಾರ್ಥದ ಉಂಗುರಗಳಲ್ಲೂ ಸಿಂಹ-ಸಿಂಹಿಣಿ ಇರುವುದನ್ನು ಫೋಟೋ ಸಹಿತ ಹೇಳಿಕೊಂಡಿದ್ದಾರೆ. ನನ್ನ 'ಸಿಂಹ'ಪ್ರೀತಿ ನಮ್ಮ ಎಂಗೇಜ್​ಮೆಂಟ್​ ರಿಂಗ್​ನಲ್ಲೂ ಪ್ರತಿಫಲಿಸುತ್ತಿರಬೇಕು. ಅದನ್ನು ನಮ್ಮ ಇನ್ನುಳಿದ ಜೀವನಪೂರ್ತಿ ಹೆಮ್ಮೆಯಿಂದ ತೋರಿಸುತ್ತಿರುವಂತಿರಬೇಕು. ಅದೇ ಕಾರಣಕ್ಕೆ ಸಿಂಹ-ಸಿಂಹಿಣಿ ವಿನ್ಯಾಸದ ಉಂಗುರವನ್ನು ವಿಶೇಷವಾಗಿ ಮಾಡಿಸಿಕೊಂಡೆವು. ಒಂದು ಷಟ್ಕೋನ, ಇನ್ನೊಂದು ಅಂಡಾಕೃತಿಯಲ್ಲಿದ್ದು, ಅದಕ್ಕಾಗಿ ಗ್ರಾಫಿಕ್ ಡಿಸೈನರ್ಸ್​ ಕೂಡ ಪರಿಶ್ರಮ ವಹಿಸಿದ್ದರು. ಆ ಉಂಗುರಗಳು ತಯಾರಾದ ಬಗೆಯೇ ವಿಶೇಷವಾದದ್ದು ಎನ್ನುತ್ತ ಹರಿಪ್ರಿಯಾ, ಆ ಸ್ಪೆಷಲ್ ರಿಂಗ್ಸ್ ಕುರಿತ ಪ್ರೀತಿಯನ್ನು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net