

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಣಕಾಸು ನೀತಿ ಸಮಿತಿಯು ತನ್ನ ತ್ರೖೆಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ್ದು, ರೆಪೊ ದರವನ್ನು ಶೇಕಡಾ 6.5ರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಸತತ ನಾಲ್ಕನೇ ಬಾರಿಗೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿಯೇ ಉಳಿಸಿಕೊಂಡಿರುವುದು ಕೋವಿಡ್ ಸಾಂಕ್ರಾಮಿಕ ಹಾವಳಿಯ ನಂತರ ಹಿನ್ನಡೆ ಅನುಭವಿಸಿದ್ದ ದೇಶದ ಆರ್ಥಿಕತೆಯು ಒಂದಿಷ್ಟು ಸ್ಥಿರತೆ ಸಾಧಿಸುತ್ತಿರುವುದರ ದ್ಯೋತಕ ಎಂದು ಪರಿಗಣಿಸಬಹುದಾಗಿದೆ. ಪ್ರಸ್ತುತ ಹಣದುಬ್ಬರ ಹೆಚ್ಚಾಗಿದ್ದರೂ ರೆಪೊ ದರ ಏರಿಕೆಗೆ ಆರ್ಬಿಐ ಮುಂದಾಗದಿರುವುದು ಸಾಲ ಪಡೆದುಕೊಂಡ ಗ್ರಾಹಕರಿಗೆ ನಿರಾಳತೆ ತರುವ ಸಂಗತಿಯಾಗಿದೆ.
ಆರ್ಬಿಐನಿಂದ ವಾಣಿಜ್ಯ ಬ್ಯಾಂಕ್ಗಳು ಪಡೆದುಕೊಳ್ಳುವ ಸಾಲದ ಮೇಲಿನ ಬಡ್ಡಿ ದರವೇ ರೆಪೊ ದರವಾಗಿರುತ್ತದೆ. ರೆಪೊ ದರದಲ್ಲಿ ಯಾವುದೇ ಬದಲಾವಣೆ ಇರದಿದ್ದರೆ ವಾಣಿಜ್ಯ ಬ್ಯಾಂಕ್ಗಳು ಕೂಡ ತಮ್ಮಿಂದ ಸಾಲ ಪಡೆದಿರುವ ಗ್ರಾಹಕರ ಸಾಲದ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯನ್ನು ಸಾಮಾನ್ಯವಾಗಿ ಮಾಡುವುದಿಲ್ಲ. ಹೀಗಾಗಿ, ಗೃಹ ಹಾಗೂ ಇತರೆ ಸಾಲ ಪಡೆದುಕೊಂಡ ಗ್ರಾಹಕರ ಸಮಾನ ಮಾಸಿಕ ಕಂತು (ಇಎಂಐ) ಪಾವತಿಯಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ. ಅಲ್ಲದೆ, ಹೊಸದಾಗಿ ಸಾಲ ಪಡೆದುಕೊಳ್ಳುವವರಿಗೂ ಅನುಕೂಲಕರ ಸನ್ನಿವೇಶ ಒದಗಿಸುತ್ತದೆ.
ಬಡ್ಡಿ ದರದಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲದಿದ್ದರೂ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗೃಹ ಹಾಗೂ ಇತರೆ ಸಾಲಗಳ ಬಡ್ಡಿ ದರವು ಅಧಿಕ ಪ್ರಮಾಣದಲ್ಲಿಯೇ ಮುಂದುವರಿದಿದೆ. ಏಕೆಂದರೆ, 2022ರ ಏಪ್ರಿಲ್ ತಿಂಗಳಲ್ಲಿ ರೆಪೊ ದರವು ಶೇಕಡಾ 4 ಮಾತ್ರ ಇತ್ತು. ಅಂದರೆ ಈಗಿರುವುದಕ್ಕಿಂತ ಶೇ. 2.5 ಕಡಿಮೆ ಇತ್ತು. 2022ರ ಮೇ ತಿಂಗಳಿನ ನಂತರ ರೆಪೊ ದರವನ್ನು ಆರ್ಬಿಐ 6 ಬಾರಿ ಏರಿಸಿದೆ. ಪ್ರತಿ ಬಾರಿ ರೆಪೊ ದರ ಏರಿದಾಗಲೂ ಬಡ್ಡಿ ದರದ ಹೆಚ್ಚಳವನ್ನು ವಾಣಿಜ್ಯ ಬ್ಯಾಂಕ್ಗಳು ಸಾಲ ಪಡೆದುಕೊಂಡ ಗ್ರಾಹಕರಿಗೆ ವರ್ಗಾಯಿಸುತ್ತ ಬಂದಿವೆ. ರಷ್ಯಾ- ಯೂಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಕಳೆದ ಫೆಬ್ರುವರಿಯಲ್ಲಿ ರೆಪೊ ದರವನ್ನು ಶೇ. 6.5ಕ್ಕೆ ಏರಿಸಿದ ನಂತರ ಯಥಾಸ್ಥಿತಿ ಮುಂದುವರಿದಿದೆ.
ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತಿದ್ದರೆ, ಅಂದರೆ ಬೆಲೆ ಏರಿಕೆಯಾಗುತ್ತಿದ್ದರೆ ಹಣದ ಹರಿವನ್ನು ನಿಯಂತ್ರಿಸುವ ಮೂಲಕ ಬೆಲೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೆಪೊ ದರ ಏರಿಕೆ ಅಸ್ತ್ರವನ್ನು ಆರ್ಬಿಐ ಸಾಮಾನ್ಯವಾಗಿ ಪ್ರಯೋಗಿಸುತ್ತದೆ. ಗ್ರಾಹಕರ ಬೆಲೆ ಸೂಚ್ಯಂಕವನ್ನು ಶೇ. 4ರಿಂದ 6ರ ನಡುವೆ ನಿರ್ವಹಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವು ಆರ್ಬಿಐಗೆ ವಹಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಹಣದುಬ್ಬರವು ಶೇಕಡಾ 6.83ಕ್ಕೆ ತಲುಪಿದೆ. ಪ್ರಸ್ತುತ ಹಣದುಬ್ಬರ ದರವು ಶೇಕಡಾ 6ರ ಮಟ್ಟವನ್ನು ದಾಟಿದ್ದರೂ ರೆಪೊ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್ಬಿಐ ನಿರ್ಧಾರ ಕೈಗೊಂಡಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಕೂಡ ಇತ್ತೀಚೆಗೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ನಿರ್ಧಾರ ಕೈಗೊಂಡಿರುವುದು ಕೂಡ
ಆರ್ಬಿಐ ತೀರ್ವನದ ಮೇಲೆ ಪ್ರಭಾವ ಬೀರಿರಬಹುದಾಗಿದೆ. ಕೆಲ ದಿನಗಳಿಂದ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಸೂಚ್ಯಂಕವು ಶುಕ್ರವಾರದಂದು ಗಮನಾರ್ಹವಾಗಿ ಹೆಚ್ಚಳ ಕಂಡಿದ್ದು, ರೆಪೊ ಕುರಿತ ಆರ್ಬಿಐ ನಿರ್ಧಾರವನ್ನು ಹೂಡಿಕೆದಾರರು ಸ್ವಾಗತಿಸಿದ್ದಾರೆ ಎಂಬುದರ ಸೂಚನೆ ಎನ್ನಬಹುದಾಗಿದೆ.