ಚೀನಾಕ್ಕೆ ಹತ್ತಿರವಾಗಿರುವ ರಷ್ಯಾ ಅಧ್ಯಕ್ಷರ ಮುಂದಿನ ಹಾದಿ ಕುತೂಹಲಕರ

Vladimar Putin 17 March 20
Published on

ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಜೀವಿತಾವಧಿಯವರೆಗೆ ಅಧ್ಯಕ್ಷ ಎಂದು ಘೋಷಿಸಿಕೊಂಡ ಬೆನ್ನಲ್ಲೇ ಮತ್ತೊಂದು ಪ್ರಬಲ ರಾಷ್ಟ್ರ ರಷ್ಯಾ ಕೂಡ ಇಂಥದ್ದೇ ಬೆಳವಣಿಗೆಗೆ ಸಾಕ್ಷಿಯಾಗಿದೆ. ವ್ಲಾದಿಮಿರ್ ಪುತಿನ್ ಇನ್ನೂ ಎರಡು ಅವಧಿಗೆ ರಷ್ಯಾ ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶ ನೀಡುವ ತಿದ್ದುಪಡಿಯನ್ನು ಸಾಂವಿಧಾನಿಕ ಕೋರ್ಟ್ ಅನುಮೋದಿಸಿದೆ. ಹಾಗಾಗಿ, 2036ರವರೆಗೆ ಪುತಿನ್ ಅಧ್ಯಕ್ಷರಾಗಿ ಮುಂದುವರಿಯಬಹುದಾಗಿದೆ! ರಷ್ಯಾದಲ್ಲಿ ಹಾಲಿ ಕಾನೂನಿನ ಪ್ರಕಾರ ಎರಡು ಅವಧಿಗೆ ಅಧ್ಯಕ್ಷರಾಗಬಹುದಿತ್ತು. 2012ರಲ್ಲಿ ಅಧ್ಯಕ್ಷಪದವಿಗೆ ಏರಿದ ಪುತಿನ್ ಅವಧಿ 2024ರಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ, ತಿದ್ದುಪಡಿಗೆ ಕೋರ್ಟ್ ಸಮ್ಮತಿಸಿರುವುದರಿಂದ ಇನ್ನೆರಡು ಅವಧಿಗೆ ಅಧ್ಯಕ್ಷರಾಗಲು ಯಾವುದೇ ಅಡ್ಡಿಯಿಲ್ಲ. ಈ ಬೆಳವಣಿಗೆ ರಷ್ಯಾದಲ್ಲಿ ಸಂಚಲನ ಮೂಡಿಸುವ ಜತೆಗೆ ಜಾಗತಿಕವಾಗಿ ಪ್ರಮುಖ ರಾಷ್ಟ್ರಗಳು ಅಚ್ಚರಿಯಿಂದ ನೋಡುತ್ತಿವೆ.

ಅಮೆರಿಕದ ಜತೆ ಜಿದ್ದಾಜಿದ್ದಿನ ಸ್ಪರ್ಧೆಗೆ ಬಿದ್ದಿರುವ ಪುತಿನ್ ಚೀನಾದ ಜತೆಗೆ ಸ್ನೇಹ ಹೆಚ್ಚಿಸಿಕೊಂಡಿದ್ದಾರೆ ಎಂಬುದು ಬಹಿರಂಗ ರಹಸ್ಯ. ತೀವ್ರ ಮಹತ್ವಾಕಾಂಕ್ಷಿಯೂ ಆಗಿರುವ ಪುತಿನ್ ಜಾಗತಿಕ ನಾಯಕನಾಗಿ ಹೊಮ್ಮಬೇಕೆಂಬ ಹಂಬಲವನ್ನೂ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಅವರು ಹಲವು ಕಸರತ್ತು ನಡೆಸುತ್ತ ಬಂದಿದ್ದರಾದರೂ, 2024ಕ್ಕೆ ಕೊನೆಗೊಳ್ಳಲಿದ್ದ ಅವರ ಅಧ್ಯಕ್ಷಾವಧಿ ಪುತಿನ್ ಚಿಂತೆಗೆ ಕಾರಣವಾಗಿತ್ತು. ಈಗ ಅದು ದೂರವಾಗಿರುವುದರಿಂದ ಅವರು ಮತ್ತಷ್ಟು ಆಕ್ರಮಕವಾಗಿ ಮುಂದುವರಿಯಲಿದ್ದಾರೆ, ಅಲ್ಲದೆ ಕಠಿಣ ನಿರ್ಧಾರಗಳನ್ನು ತಳೆಯಲಿದ್ದಾರೆ ಎಂಬುದು ತಜ್ಞರ ಅನಿಸಿಕೆ.

2014ರ ಡಿಸೆಂಬರ್​ನಲ್ಲಿ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಪುತಿನ್ ಬದಲಾಗಿರುವ ಭಾರತವನ್ನು ಕಂಡಿದ್ದಾರೆ ಮತ್ತು ಅಂತಾರಾಷ್ಟ್ರೀಯ ವಲಯದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಾಮುಖ್ಯವನ್ನೂ ಗಮನಿಸಿದ್ದಾರೆ. ಹಾಗಾಗಿಯೇ, 2014ರಲ್ಲೇ ವಜ್ರ ಸಂಸ್ಕರಣೆ ಸೇರಿದಂತೆ 14 ದ್ವಿಪಕ್ಷೀಯ ಒಪ್ಪಂದಗಳು ಉಭಯ ರಾಷ್ಟ್ರಗಳ ನಡುವೆ ಏರ್ಪಟ್ಟಿದ್ದವು ಎಂಬುದು ಗಮನಾರ್ಹ. ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಂಡುಕೊಂಡಿರುವ ಪುತಿನ, ಆ ಕಾರಣಕ್ಕಾಗಿಯೇ ಭಾರತದ ಪ್ರಧಾನಿಯೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ. ಆದರೆ, ಭಾರತವು ಅಮೆರಿಕದ ಆಪ್ತ ಮಿತ್ರರಾಷ್ಟ್ರ ಆಗಿರುವುದು ರಷ್ಯಾದ ಕಣ್ಣಿಗೆ ಕುಕ್ಕುತ್ತಿದೆ. ಅದೇ ರೀತಿ, ರಷ್ಯಾ ಚೀನಾಕ್ಕೆ ಹತ್ತಿರವಾಗುತ್ತಿರುವುದು ಕೂಡ ಭಾರತಕ್ಕೆ ಕೊಂಚ ಕಳವಳಕಾರಿ ಸಂಗತಿಯೇ. ಭಾರತದ ವಿದೇಶಾಂಗ ನೀತಿ ಈಗ ಬಲಿಷ್ಠಗೊಂಡಿದ್ದು, ಜಾಗತಿಕ ಪ್ರಮುಖ ರಾಷ್ಟ್ರಗಳೊಡನೆ ಬಾಂಧವ್ಯವೃದ್ಧಿ ಆಗಿದೆ ಮತ್ತು ಇದರಲ್ಲಿ ರಷ್ಯಾ ಕೂಡ ಹೊರತಾಗಿಲ್ಲ ಎಂಬುದು ಗೊತ್ತಿರುವಂಥದ್ದೇ. ಆದರೆ, ಪುತಿನ್ ಅಧಿಕಾರಾವಧಿ ವಿಸ್ತರಣೆಗೊಂಡಿರುವ ಪರಿಣಾಮ ಅಂತಾರಾಷ್ಟ್ರೀಯ ರಾಜನೀತಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು.

ರಷ್ಯಾದ ಆರ್ಥಿಕ ಸ್ಥಿತಿಯನ್ನು ಹಳಿಗೆ ತಂದಿದ್ದ ಪುತಿನ್ ಯಂತ್ರಗಳ ಬಳಕೆ ಹೆಚ್ಚುವಂತೆ ಮಾಡಿದರಲ್ಲದೆ, ಕೈಗಾರೀಕರಣದಿಂದ ಹಲವು ಸುಧಾರಣೆಗಳನ್ನು ತಂದರು. ವಿದೇಶಿ ಗುಪ್ತಚರದಳ ಕೆಜಿಬಿಯಲ್ಲಿ ಸೇವೆ ಸಲ್ಲಿಸಿ, ಅಧ್ಯಕ್ಷಪದವಿವರೆಗೂ ಪಯಣ ಬೆಳೆಸಿದ ಪುತಿನ್ ಈಗಿನ ಸವಾಲುಗಳಿಗೆ, ಭಯೋತ್ಪಾದನೆ, ಆರ್ಥಿಕತೆಯ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಲ್ಪಿಸುತ್ತಾರೆ ಎಂಬುದು ಕುತೂಹಲಕರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net