ಸಂಪಾದಕೀಯ| ಜವಾಬ್ದಾರಿ ಮರೆಯುವಂತಿಲ್ಲ

VidhanaSoudha
Published on

ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಎಲ್ಲ ಸದಸ್ಯರು ತಾವು ಆಯ್ಕೆಯಾದ ಮೂರು ತಿಂಗಳ ಒಳಗೆ ತಮ್ಮ ಆಸ್ತಿಯ ವಿವರವನ್ನು ಸಲ್ಲಿಸುವುದು ಕರ್ನಾಟಕ ಲೋಕಾಯುಕ್ತ ಕಾಯ್ದೆ ಪ್ರಕಾರ ಕಡ್ಡಾಯವಾಗಿದೆ. 224 ಶಾಸಕರಿಗೂ ಆಸ್ತಿವಿವರ ಸಲ್ಲಿಸುವಂತೆ ಲೋಕಾಯುಕ್ತ ಸಂಸ್ಥೆ ಜೂನ್ 30ರವರೆಗೆ ಗಡುವು ನೀಡಿತ್ತು. ಸರ್ಕಾರದ ಮುಖ್ಯಕಾರ್ಯದರ್ಶಿಗೂ ಸೂಚಿಸಿತ್ತು. ಕಳೆದ ಬಾರಿ ಸಲ್ಲಿಸಿದ್ದೇವೆಂದು ಸುಮ್ಮನಿರುವಂತಿಲ್ಲ. ನೂತನ ಹಾಗೂ ಮರುಆಯ್ಕೆಯಾದವರೂ ಸಲ್ಲಿಸಬೇಕು ಎಂದು ತಿಳಿಸಿತ್ತು. ಆದರೂ ಈ ಬಾರಿ 51 ಶಾಸಕರು, 21 ವಿಧಾನ ಪರಿಷತ್ ಸದಸ್ಯರು ಸಲ್ಲಿಕೆ ಮಾಡಿಲ್ಲ. ಇದರಲ್ಲಿ ಸಾಕಷ್ಟು ಜನ ಮಂತ್ರಿಗಳೂ ಇದ್ದಾರೆ.

ಆಸ್ತಿ ವಿವರಗಳನ್ನು ಸಲ್ಲಿಸದೇ ಇರುವ ಜನಪ್ರತಿನಿಧಿಗಳ ಹೆಸರುಗಳನ್ನು ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿ ಅವರಿಗೆ ಎಚ್ಚರಿಸುವ ಕೆಲಸವನ್ನು ಲೋಕಾಯುಕ್ತ ಸಂಸ್ಥೆ ಕಾಲಕಾಲಕ್ಕೆ ಮಾಡುತ್ತ ಬಂದಿದೆ. ಈ ಬಾರಿಯೂ ಆ ರೀತಿಯ ಒಂದು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸುವಂತೆ ಮಾಡಲು ಈ ಸಾರ್ವಜನಿಕ ಪ್ರಕಟಣೆ ಹೊರಡಿಸುವುದನ್ನು ಹೊರತುಪಡಿಸಿ ಬೇರಾವ ಮಾರ್ಗವೂ ಸಂಸ್ಥೆಯ ಬಳಿ ಇಲ್ಲ. ಹೆಚ್ಚೆಂದರೆ ರಾಜ್ಯಪಾಲರಿಗೆ ವರದಿಯನ್ನು ಸಲ್ಲಿಸಬಹುದು. ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೇನೋ ಸಂಸ್ಥೆ ನೀಡಿದೆ. ಆದರೆ ಆ ರೀತಿಯ ಅವಕಾಶ ಕಾನೂನಿನಲ್ಲಿ ಇಲ್ಲ. ಕೆಲವು ವರ್ಷಗಳ ಹಿಂದೆ, ಈ ರೀತಿಯ ಸಾರ್ವಜನಿಕ ಪ್ರಕಟಣೆಗೂ ಹೆದರುವಂತಹ ಸೂಕ್ಷ್ಮ ಮನಸ್ಸಿನ ಜನಪ್ರತಿನಿಧಿಗಳು ಇದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಅಂತಹ ಯಾವುದೇ ಸಣ್ಣ ಪ್ರಮಾಣದ ಉಪಕ್ರಮಕ್ಕೆ ಯಾರೂ ಬಗ್ಗುವುದಿಲ್ಲ. ಹೀಗಾಗಿ ಜನಪ್ರತಿನಿಧಿಗಳ ಆಸ್ತಿ ವಿವರ ಸಲ್ಲಿಸಬೇಕೆಂಬ ನಿಯಮ ಮಾಡಿದ್ದರ ಹಿಂದಿನ ಉದ್ದೇಶ ವಿಫಲವಾಗುತ್ತಿದೆ. ಕೆಲವರು ಪ್ರಾಮಾಣಿಕವಾಗಿ ನಿರ್ದಿಷ್ಟ ಕಾಲಮಿತಿಯೊಳಗೆ ಸಲ್ಲಿಸುತ್ತಾರೆ. ಬಹುತೇಕರು ತಡವಾಗಿ ಸಲ್ಲಿಸುತ್ತಾರೆ. ಇನ್ನು ಕೆಲವರು ನಿಗದಿತ ಸಮಯಕ್ಕಿಂತ ಆರೇಳು ತಿಂಗಳು ಹೆಚ್ಚು ಸಮಯವಾದರೂ ಸಲ್ಲಿಸುವುದೇ ಇಲ್ಲ.

ಇದು ಮನುಷ್ಯ ಸಹಜ ಪ್ರವೃತ್ತಿ ಎನ್ನಬಹುದಾದರೂ ಲಕ್ಷಾಂತರ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅವರದೇ ಆದ ಕೆಲವು ಜವಾಬ್ದಾರಿಗಳಿರುತ್ತವೆ. ತಮ್ಮ ವರ್ಚಸ್ಸು, ಉತ್ತರದಾಯಿತ್ವ ಉಳಿಸಿಕೊಳ್ಳುವುದಕ್ಕೆ ಅವರು ಆ ಹೊಣೆಗಾರಿಕೆ ಯನ್ನು ನಿರ್ದಿಷ್ಟ ಸಮಯದೊಳಗೆ ಪೂರೈಸಲೇಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net