

ದೇಶದಲ್ಲಿ ಬಹುತೇಕ ವ್ಯಕ್ತಿಯು ತನ್ನ ದಿನವನ್ನು ಆರಂಭಿಸುವುದು ಟೀ ಅಥವಾ ಕಾಫಿ ಸೇವನೆಯಿಂದ ಎಂಬುದು ಎಲ್ಲರಿಗೂ ತಿಳಿದಿದೆ. ಈ ಎರಡೂ ಪಾನೀಯಗಳನ್ನು ತಯಾರಿಸಲು ಹಾಲು ತುಂಬಾನೇ ಮುಖ್ಯ. ಹಾಲಿನ ವಿಚಾರಕ್ಕೆ ಬಂದರೆ, ಹಸುವಿನ ಹಾಲು ಉತ್ತಮವೋ ಅಥವಾ ಎಮ್ಮೆಯ ಹಾಲು ಉತ್ತಮವೋ ಎಂಬ ಪ್ರಶ್ನೆ ಆಗಾಗ ಕಾಡುತ್ತಲೇ ಇರುತ್ತದೆ. ನಿಮಗೂ ಕಾಡಿರಬಹುದು. ಇದೀಗ ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
ಹಸುವಿನ ಹಾಲು ಉತ್ತಮ
ಹಸುವಿನ ಹಾಲು ಮತ್ತು ಎಮ್ಮೆಯ ಹಾಲಿನಲ್ಲಿ ಸಾಕಷ್ಟು ಉತ್ತಮ ಪೋಷಕಾಂಶಗಳಿವೆ. ಹಾಗಾಗಿ ಎರಡೂ ಕೂಡ ಒಳ್ಳೆಯದೆ. ಆದರೆ ಕೆಲವು ಕಾರಣಗಳಿಂದ ಎಮ್ಮೆ ಹಾಲಿಗಿಂತ ಹಸುವಿನ ಹಾಲು ಉತ್ತಮ ಎಂದು ಹೇಳಲಾಗುತ್ತದೆ. ಎಮ್ಮೆಯ ಹಾಲಿಗೆ ಹೋಲಿಸಿದರೆ ಹಸುವಿನ ಹಾಲಿನಲ್ಲಿ ಪ್ರೋಟೀನ್ಗಳು, ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್ಗಳು ಸಮಾನವಾಗಿರುತ್ತದೆ. ಆದರೆ, ಎಮ್ಮೆ ಹಾಲು, ಹಸುವಿನ ಹಾಲಿಗಿಂತ ಮಂದ ಅಥವಾ ದಪ್ಪವಾಗಿರುತ್ತದೆ. ಹೀಗಾಗಿ ಇದು ಸುಲಭವಾಗಿ ಜೀರ್ಣವಾಗುವುದಿಲ್ಲ. ಅದರಲ್ಲೂ ಕೆಲವರಿಗೆ ಎಮ್ಮೆ ಹಾಲು ಕುಡಿದರೆ ಅಜೀರ್ಣವಾಗುತ್ತದೆ. ಆದರೆ, ಹಸುವಿನ ಹಾಲು ಬೇಗನೆ ಜೀರ್ಣವಾಗುತ್ತದೆ.
ಎಮ್ಮೆ ಹಾಲಿನಲ್ಲಿ ಕೊಬ್ಬಿನಾಂಶ ಅಧಿಕ
ಹಸುವಿನ ಹಾಲಿನಲ್ಲಿ ಎಮ್ಮೆಯ ಹಾಲಿಗಿಂತ ಹೆಚ್ಚು ವಿಟಮಿನ್ ಎ ಇರುತ್ತದೆ. ಕಣ್ಣಿನ ಆರೋಗ್ಯ, ಮೂಳೆಗಳ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಗೆ ವಿಟಮಿನ್ ಎ ಅತ್ಯಗತ್ಯ. ಹಸುವಿನ ಹಾಲು ಮಕ್ಕಳಿಗೆ ತುಂಬಾ ಒಳ್ಳೆಯದು. ಎಮ್ಮೆ ಹಾಲಿಗೆ ಹೋಲಿಕೆ ಮಾಡಿದರೆ, ಹಸುವಿನ ಹಾಲಿನಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇರುತ್ತದೆ. ಒಂದು ವೇಳೆ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದರೆ, ಕೊಬ್ಬಿನ ಪ್ರಮಾಣವೂ ಸಹ ಹೆಚ್ಚಾಗುತ್ತದೆ. ಇದರಿಂದ ಹೃದಯಾಘಾತ ಸಂಭವಿಸುವ ಅಪಾಯವೂ ಹೆಚ್ಚಾಗುತ್ತದೆ. ಹೃದಯದ ಸಮಸ್ಯೆ ಇರುವವರು ಎಮ್ಮೆಯ ಹಾಲಿನ ಬದಲು ಹಸುವಿನ ಹಾಲನ್ನು ಕುಡಿಯಬೇಕು. ಹಸುವಿನ ಹಾಲಿನಲ್ಲಿ ಕ್ಯಾಲರಿಗಳು ತುಂಬಾ ಕಡಿಮೆ. ತೂಕ ಇಳಿಸಲು ಬಯಸುವವರಿಗೆ ಹಸುವಿನ ಹಾಲು ತುಂಬಾ ಒಳ್ಳೆಯದು.
ಎಮ್ಮೆ ಹಾಲು ನಿದ್ರೆಗೆ ಒಳ್ಳೆಯದು
ಕೆಲವರಿಗೆ ಲ್ಯಾಕ್ಟೋಸ್ ಅಲರ್ಜಿ ಇರುತ್ತದೆ ಮತ್ತು ಹಾಲು ಕುಡಿಯಲು ತೊಂದರೆಯಾಗುತ್ತದೆ. ಅದರಲ್ಲೂ ಎಮ್ಮೆ ಹಾಲು ಕುಡಿದರೆ ತುಂಬಾ ಅಲರ್ಜಿ ಬರುತ್ತದೆ. ಎಮ್ಮೆಯ ಹಾಲನ್ನು ಹಸುವಿನ ಹಾಲಿಗಿಂತ ಹೆಚ್ಚು ಹೊತ್ತು ಇಡಬಹುದು. ಎಮ್ಮೆ ಹಾಲು ಬೇಗನೆ ಕೆಡುವುದಿಲ್ಲ, ಆದರೆ ಹಸುವಿನ ಹಾಲನ್ನು 1-2 ದಿನಗಳಲ್ಲಿ ಬಳಸಬೇಕು, ಇಲ್ಲದಿದ್ದರೆ ಹಾಲು ಹಾಳಾಗುತ್ತದೆ. ಎಮ್ಮೆ ಹಾಲು ಕುಡಿಯುವುದು ನಿದ್ರೆಗೆ ತುಂಬಾ ಒಳ್ಳೆಯದು. ಎಮ್ಮೆಯ ಹಾಲಿನೊಂದಿಗೆ ಕೋವಾ, ಮೊಸರು, ಪನೀರ್, ಮಲೈ ಮಾಡುವುದು ಒಳ್ಳೆಯದು.
ಇನ್ನೂ ಹಾಲಿನಲ್ಲಿ ಪೋಷಕಾಂಶಗಳು ಹೇರಳವಾಗಿರುವುದರಿಂದ ಪ್ರತಿನಿತ್ಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿದ್ದು, ಹಲ್ಲು ಮತ್ತು ಮೂಳೆಗಳ ಆರೋಗ್ಯಕ್ಕೆ ಇದು ಉಪಯುಕ್ತವಾಗಿದೆ. ಹಾಲಿನಲ್ಲಿ ವಿಟಮಿನ್ ಡಿ ಇದೆ. ಕ್ಯಾಲ್ಸಿಯಂ ಹೀರಿಕೊಳ್ಳಲು ಇದು ಅತ್ಯಗತ್ಯ. (ಏಜೆನ್ಸೀಸ್)