More

    ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ: ಫಲಿಸಿತು ಶತಕೋಟಿ ಭಾರತೀಯರ ಪ್ರಾರ್ಥನೆ, ಸಿಹಿ ಹಂಚಿ ಸಂಭ್ರಮ

    ಡೆಹ್ರಾಡೂನ್​: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್​ಯಾರ್​ ಸುರಂಗದೊಳಗೆ ಸಿಲುಕಿ, ಕಳೆದ 17 ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಹೊಸ ಬದುಕಿಗಾಗಿ ಆಸೆಗಣ್ಣುಗಳಿಂದ ಎದುರು ನೋಡುತ್ತಿದ್ದ ಎಲ್ಲ 41 ಕಾರ್ಮಿಕರನ್ನು ಸುರಕ್ಷಿತವಾಗಿ ಸುರಂಗದಿಂದ ಇಂದು ಹೊರಕರೆತರಲಾಗಿದೆ. 17 ದಿನಗಳ ನಿರಂತರ ಶ್ರಮ ಮತ್ತು ಅಸಂಖ್ಯಾತ ಜನಗಳ ಪ್ರಾರ್ಥನೆಗೆ ಫಲ ಸಿಕ್ಕಿದ್ದು, ಬಹುದೊಡ್ಡ ರಕ್ಷಣಾ ಕಾರ್ಯಾಚರಣೆ ದೊಡ್ಡ ಯಶಸ್ಸು ಸಾಧಿಸಿದೆ. ನಿಜಕ್ಕೂ ಇದೊಂದು ಬಿಗ್​ ಅಂಡ್​ ಸ್ವೀಟ್​ ನ್ಯೂಸ್​ ಎಂದೇ ಹೇಳಬಹುದಾಗಿದೆ.

    ಸುಮಾರು 50 ಮೀಟರ್​ಗೂ ಅಧಿಕ ದೂರದಲ್ಲಿ ಸುರಂಗದ ಒಳಗಡೆ ಸಿಲುಕಿದ್ದ ಎಲ್ಲ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಪೈಪ್​ ಮೂಲಕ ಗಾಲಿ ಸ್ಟ್ರೆಚರ್​ ಸಹಾಯದಿಂದ ರಕ್ಷಣಾ ತಂಡಗಳು ಹೊರಗೆಳೆದು ರಕ್ಷಣೆ ಮಾಡಿದವು. ಹೊರಗೆ ಬಂದರ ಕಾರ್ಮಿಕರಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ಅಡಿಯಲ್ಲಿ ದೇಹ ಪರೀಕ್ಷೆ ಮಾಡಿ ತಕ್ಷಣ ಆಂಬ್ಯುಲೆನ್ಸ್​ಗಳ ಸಹಾಯದಿಂದ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಎಲ್ಲ ಕಾರ್ಮಿಕರು ಆರೋಗ್ಯಯುತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪ್ರತೀ ಹಂತದಲ್ಲೂ ನಾಲ್ಕು ನಾಲ್ಕು ಕಾರ್ಮಿಕರನ್ನು ಹೊರಗೆ ಕರೆತರಲಾಯಿತು. ಕಾರ್ಮಿಕರ ರಕ್ಷಣೆಗೆ ಶತಕೋಟಿ ಭಾರತೀಯರು ಪ್ರಾರ್ಥಿಸಿದ್ದರು. ಎಲ್ಲರ ಪ್ರಾರ್ಥನೆ ಇಂದು ಫಲಿಸಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾರ್ಮಿಕರು ಹೊರಗೆ ಬರುತ್ತಿದ್ದಂತೆ ಸುತ್ತಲೂ ಜೈಕಾರಗಳು ಮೊಳಗಿದವು ಮತ್ತು ಸ್ಥಳದಲ್ಲಿ ನೆರೆದಿದ್ದ ಜನರು ಸಿಹಿ ಹಂಚಿ ಸಂಭ್ರಮಿಸಿದರು.

    ನುರಿತ ಕಾರ್ಮಿಕರ ತಂಡವು ಇಲಿ-ಕುಳಿ ಗಣಿಗಾರಿಕೆ ತಂತ್ರವನ್ನು ಬಳಸಿಕೊಂಡು ಕೈಯಿಂದ ರಂಧ್ರ ಕೊರೆಯುವ ಮೂಲಕ ಅಂತಿಮ ಹಂತದ ಕಾರ್ಯಾಚರಣೆಯಲ್ಲಿ ಯಶಸ್ವಿಯಾಯಿತು. 800-ಎಂಎಂ ವ್ಯಾಸದ ಪೈಪ್ ಅನ್ನು ಆಗರ್ ಯಂತ್ರದಿಂದ ಅವಶೇಷಗಳ ಮೂಲಕ ಸೇರಿಸಲಾಗಿದ್ದು, ಅದರ ಮೂಲಕ ಕಾರ್ಮಿಕರನ್ನು ಹೊರಗೆ ಕರೆತರಲಾಗಿದೆ. ಈ ಮೊದಲು ಬೃಹತ್ ಆಗರ್ ಯಂತ್ರದ ಮೂಲಕ ಈ ಕೊರೆತವನ್ನು ನಡೆಸಲಾಗಿತ್ತು. ಆದರೆ, ಕಳೆದ ಶುಕ್ರವಾರ ಈ ಯಂತ್ರವು 47 ಮೀಟರ್‌ನಲ್ಲಿ ಅವಶೇಷಗಳಡಿ ಸಿಲುಕಿ ಛಿದ್ರವಾಗಿತ್ತು.

    ಕುಸಿದ ಸುರಂಗದಲ್ಲಿ ಕಳೆದ 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರನ್ನು ದೊಡ್ಡ ಪೈಪ್​ ಮೂಲಕ ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಒಬ್ಬೊಬ್ಬರಾಗಿ ಹೊರಗೆಳೆದು ರಕ್ಷಣೆ ಮಾಡಲಾಯಿತು. ಪೈಪ್​ಗಳನ್ನು ವೆಲ್ಡಿಂಗ್​ ಮಾಡಿರುವ ಕಾರಣ ಕಾರ್ಮಿಕರು ತೆವಳುವಾಗ ತರಚಿ ಗಾಯಗಳಾಗಬಹುದು ಎಂಬ ಕಾರಣಕ್ಕೆ ಗಾಲಿ ಸ್ಟ್ರೆಚರ್​ ಸಹಾಯದಿಂದ ಹೊರಗೆ ಕರೆತರಲಾಯಿತು. ಕಳೆದ 17 ದಿನಗಳಿಂದ ಯಾವುದೇ ನೈಸರ್ಗಿಕ ಬೆಳಕು ಮತ್ತು ಸಂಪೂರ್ಣ ಊಟವಿಲ್ಲದೆ ಸುರಂಗದ ಭಗ್ನಾವಶೇಷಗಳ ಅಡಿಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ನಿತ್ರಾಣಗೊಂಡಿರುವ ಕಾರ್ಮಿಕರಿಗೆ ತೆವಳುವುದು ತುಂಬಾ ಕಷ್ಟ. ಹೀಗಾಗಿ ಗಾಲಿ ಸ್ಟ್ರೆಚರ್​ ರಕ್ಷಣಾ ಕಾರ್ಯಕರ್ತರ ಪ್ರಧಾನ ಆಯ್ಕೆಯಾಗಿತ್ತು.

    ಸುರಂಗ ಮಾರ್ಗ ನಿರ್ಮಾಣದ ಉದ್ದೇಶವೇನು?
    ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿತ್ತು. ಆದರೆ, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದರು.

    ಸಾವು ಗೆದ್ದ 41 ಕಾರ್ಮಿಕರು! 17 ದಿನದ ಬಳಿಕ ಸುರಂಗದಿಂದ ಹೊರಕ್ಕೆ, ಒಬ್ಬೊಬ್ಬರನ್ನು ಹೊರ ಕರೆತರುತ್ತಿರುವ NDRF

    ಕೊಹ್ಲಿ ಇಸ್​ ಕಿಂಗ್​ ಎಂಬುದು ಮತ್ತೊಮ್ಮೆ ಸಾಬೀತು! ವಿಕಿಪೀಡಿಯಾ ಪುಟದಲ್ಲೂ ವಿರಾಟ ರೂಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts