More

    ಬಿಸಿಲ ತಾಪ: ಪಕ್ಷಿಗಳ ದಾಹ ತೀರಿಸಲು ಪಣ ತೊಟ್ಟ ಚಿಣ್ಣರು!

    ಕಳಸ: ಶಾಲೆಗೆ ಬೇಸಿಗೆ ರಜೆ ಸಿಕ್ಕ ಕೂಡಲೇ ಅಜ್ಜಿ ಮನೆ, ನೆಂಟರ ಮನೆ, ಶಿಬಿರಗಳತ್ತ ಮುಖ ಮಾಡುವ ಶಾಲಾ ಮಕ್ಕಳ ನಡುವೆ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ ತಾಲೂಕಿನ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಡಿಕೆ ಗಾಳಿಗಂಡಿ ಶಾಲೆಯ ಮಕ್ಕಳು.

    ಹೌದು… ಪರೀಕ್ಷೆಗಳೆಲ್ಲ ಮುಗಿದು ಮಕ್ಕಳು ಬೇಸಿಗೆ ರಜೆಯ ಮಜೆಯಲ್ಲಿದ್ದಾರೆ. ಆದರೆ ಈ ಶಾಲೆಯ ಚಿಣ್ಣರು ಈ ರಜೆಯ ಸಮಯವನ್ನು ಪಕ್ಷಿ ಸಂಕುಲದ ಉಳುವಿಗಾಗಿ ಮುಡುಪಾಗಿಟ್ಟಿದ್ದಾರೆ.
    ಕಳೆದ ವರ್ಷ ಮಳೆಯ ಕೊರತೆ ಹಾಗೂ ಈ ವರ್ಷ ಬಿಸಿಲ ತಾಪ ಮೇರೆ ಮೀರಿದ್ದು, ಸೂರ್ಯದೇವನ ರೌದ್ರಾವತಾರಕ್ಕೆ ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳು ತತ್ತರಿಸಿ ಹೋಗಿವೆ. ಬೆಳಗ್ಗೆ 10ರ ವೇಳೆಗೆ ಆಚೆ ಕಾಲಿಡಲು ಯೋಚಿಸುವಷ್ಟು ತಾಪಮಾನ ಏರಿಕೆಯಾಗಿದ್ದು, ಜೀವಜಲಕ್ಕೆ ಪರದಾಟ ಶುರುವಾಗಿದೆ.
    ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹೇರಡಿಕೆ ಗಾಳಿಗಂಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸಮೂರ್ತಿ, ಶಿಕ್ಷಕ ಮಧುಸೂದನ್ ಮಕ್ಕಳೊಂದಿಗೆ ಸೇರಿ ಶಾಲೆಯ ಆವರಣದಲ್ಲಿ ಪಕ್ಷಿಗಳ ಬಾಯಾರಿಕೆ, ಹಸಿವು ನೀಗಿಸಲು ಯೋಚನೆ ಮಾಡಿದ್ದಾರೆ. ಅದರಂತೆ ಈ ಶಾಲೆಯಲ್ಲಿರುವ ಒಂದರಿಂದ ಐದನೇ ತರಗತಿಯ 18 ಮಕ್ಕಳ ಪುಟ್ಟ ಸೈನ್ಯದೊಂದಿಗೆ ಯೋಜನೆಯನ್ನು ಅಚ್ಚುಕಟ್ಟಾಗಿ ಕಾರ್ಯರೂಪಕ್ಕೆ ತಂದಿದ್ದಾರೆ.
    ಊರಲ್ಲಿ ಮನೆ, ಮನೆ ಸುತ್ತಿ ಪ್ಲಾಸ್ಟಿಕ್ ಬಾಟಲ್, ಪ್ಲಾಸಿಕ್ ಡಬ್ಬಗಳನ್ನು ಸಂಗ್ರಹಿಸಿದ್ದಾರೆ. ಸಂಗ್ರಹಿಸಿದ ನೀರಿನ ಬಾಟಲ್ ಹಾಗೂ ಇತರೆ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ ಹಕ್ಕಿಗಳಿಗೆ ಫೀಡರ್‌ಗಳನ್ನು ಸ್ವತಃ ತಯಾರಿಸಿದ್ದಾರೆ. ಈ ಮೂಲಕ ಹಕ್ಕಿಗಳಿಗೆ ಬೇಸಿಗೆಯಲ್ಲಿ ನೀರು ಮತ್ತು ಆಹಾರ ನೀಡುವ ಮಹಾತ್ಕಾರ್ಯಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.
    ನೀರಿನ ಜತೆಗೆ ಪಕ್ಷಿಗಳಿಗೆ ಒಂದೆ ಕಡೆ ಆಹಾರ ಸಿಗುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಈ ರೀತಿಯ ಆಹಾರ ಫೀಡರ್‌ಗಳನ್ನು ತಮ್ಮ ಶಾಲೆಯ ಆವರಣದಲ್ಲಿನ ಗಾರ್ಡ್‌ನ್‌ನಲ್ಲಿರುವ ಗಿಡ, ಮರಗಳಲ್ಲಿ ನೇತು ಹಾಕಿದ್ದಾರೆ. ಶಾಲೆಯ ಕಾಂಪೌಂಡ್‌ನಲ್ಲೂ ಇಟ್ಟಿದ್ದಾರೆ. ಜತೆಗೆ ಇವುಗಳ ನಿರ್ವಹಣೆಗೆಂದು ವಿದ್ಯಾರ್ಥಿಗಳ ತಂಡಗಳನ್ನು ಮಾಡಲಾಗಿದೆ. ಆಯಾಯ ತಂಡಗಳಿಗೆ ನಿಗದಿ ಪಡಿಸಿದ ದಿನದಂದು ಬಂದು ನೀರು ಮತ್ತು ಆಹಾರ ಇಡಲು ವ್ಯವಸ್ಥೆ ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಮಕ್ಕಳಲ್ಲಿ ಪಕ್ಷಿ ಸಂಕುಲದ ರಕ್ಷಣೆಯ ಮಹತ್ವವನ್ನು ಮೂಡಿಸಿ ಶಿಕ್ಷಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟು ಮಾತ್ರವಲ್ಲ ಆಟ, ಪಾಠ ಹಾಗೂ ನಿರ್ವಹಣೆಯಿಂದಲೂ ಗಮನ ಸೆಳೆದಿದೆ.

    ನಾವೇ ತಯಾರಿಸಿ ಗಿಡಗಳಿಗೆ ಕಟ್ಟಿದ ಫೀಡರ್‌ಗಳಲ್ಲಿ ಪಕ್ಷಿಗಳು ನೀರು ಕುಡಿದು, ಕಾಳು ತಿನ್ನುವಾಗ ತುಂಬಾನೇ ಖುಷಿಯಾಯಿತು. ಇದೇ ರೀತಿ ನಮ್ಮ ಮನೆಯಲ್ಲಿರುವ ಗಿಡಗಳಲ್ಲೂ ಫೀಡರ್ ಕಟ್ಟುತ್ತೇನೆ. ಪ್ರತಿಯೊಬ್ಬರೂ ಇದೇ ರೀತಿ ಮಾಡಿದರೆ ಪಕ್ಷಿಗಳಿಗೆ ಸುಲಭವಾಗಿ ನೀರು, ಆಹಾರ ಸಿಗಲಿದೆ.
    ಶ್ರೇಯಾ ಶೆಟ್ಟಿ, ವಿದ್ಯಾರ್ಥಿನಿ

    ಪಕ್ಷಿಗಳಿಗೆ ನೀರಿಡುವ ಫೀಡರ್‌ಗಳನ್ನು ವಿದ್ಯಾರ್ಥಿಗಳ ಕೈಯಿಂದಲ್ಲೇ ತಯಾರಿಸಲಾಗಿದೆ. ಬೇಸಿಗೆಯಲ್ಲಿ ಪಕ್ಷಿಗಳಿಗೆ ಏಕೆ ನೀರು ಇಡಬೇಕು ಎನ್ನುವ ಜಾಗೃತಿಯನ್ನು ಮಕ್ಕಳಿಗೆ ಮೂಡಿಸಲಾಗಿದೆ. ಶಿಕ್ಷಣದ ಜತೆ ಸಾಮಾಜಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ಶಾಲೆಯ ಆವರಣದಲ್ಲಿ ಬೆಳೆಸಲಾದ ಗಿಡಗಳಲ್ಲಿ ನೀರಿನ ಫೀಡರ್‌ಗಳನ್ನು ಇಡಲಾಗಿದೆ. ವಿದ್ಯಾರ್ಥಿಗಳ ತಂಡಗಳನ್ನು ಮಾಡಿ ಪ್ರತಿನಿತ್ಯ ಅದಕ್ಕೆ ನೀರು, ಆಹಾರ ಇಡುವಂತೆ ನೋಡಿಕೊಳ್ಳಲಾಗುತ್ತಿದೆ.
    ಮಧುಸೂದನ್, ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts