ಸಂಪಾದಕೀಯ| ಅಮಾನವೀಯ ನಡೆ

protest
Published on

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲವಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳಿಂದ ಮಲದ ಗುಂಡಿ ಸ್ವಚ್ಛ ಮಾಡಿಸಿದ ಪ್ರಕರಣ ತೀವ್ರ ಖಂಡನೀಯ ಮತ್ತು ಅಮಾನವೀಯ. ಮಕ್ಕಳನ್ನು ಇಂಥ ಕೆಲಸಕ್ಕೆ ಬಳಸಿಕೊಂಡಿರುವುದು ಅಕ್ಷಮ್ಯ. ಘಟನೆ ಸಂಬಂಧ ಪ್ರಾಂಶುಪಾಲೆ, ಶಿಕ್ಷಕರು ಸೇರಿ ಮೂವರನ್ನು ಅಮಾನತುಗೊಳಿಸಲಾಗಿದೆ. ‘ಮಲದಗುಂಡಿ ಸ್ವಚ್ಛಗೊಳಿಸಲು ಮಕ್ಕಳನ್ನು ಬಳಕೆ ಮಾಡಿರುವ ವಿಚಾರ ಗಮನಕ್ಕೆ ಬಂದಿದೆ. ವರದಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಪ್ರಕರಣದ ಜತೆಗೆ, ವಸತಿ ಶಾಲೆಯ ಇನ್ನಿತರ ಅವ್ಯವಸ್ಥೆಗಳು, ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಅದರಲ್ಲೂ, ಮಕ್ಕಳಿಂದ ಮಲದ ಗುಂಡಿ ಸ್ವಚ್ಛ ಮಾಡಿಸಿದ ಕೃತ್ಯ ನಿಜಕ್ಕೂ ಹೇಯವಾದದ್ದು. ಸ್ವಾಭಾವಿಕವಾಗಿಯೇ ಇದು ಪಾಲಕರನ್ನು ಕೆರಳಿಸಿದೆ; ಮಾತ್ರವಲ್ಲ ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

ಸಣ್ಣಪುಟ್ಟ ಕೆಲಸಗಳನ್ನು ತಂತ್ರಜ್ಞಾನದ ಬಲದಿಂದ ಮಾಡಲಾಗುತ್ತಿರುವ ಕಾಲವಿದು. ಅಲ್ಲದೆ, ಮಲಗುಂಡಿ, ಒಳಚರಂಡಿ ಸ್ವಚ್ಛತೆಗೆ ಸಾಕಷ್ಟು ಸುಧಾರಿತ ಯಂತ್ರಗಳು ಬಂದಿವೆ, ಅವುಗಳ ಬಳಕೆಯೂ ವ್ಯಾಪಕವಾಗುತ್ತಿದೆ. ಹೀಗಿರುವಾಗ ಹೊಸ ಚಿಂತನೆಗಳು ಅರಳಬೇಕಾದ ಶಾಲೆಯಲ್ಲಿಯೇ ವಿಕೃತ ಎನ್ನಿಸುವಂಥ ಕೃತ್ಯ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆಯಾದರೂ, ಅದು ದಾರಿ ತಪ್ಪಬಾರದು. ರ್ತಾಕ ಅಂತ್ಯ ಕಂಡು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಇಲ್ಲಿ ವ್ಯವಸ್ಥೆಯ ವೈಫಲ್ಯವೂ ಅಷ್ಟೇ ಮುಖ್ಯ ಕಾರಣ. ಸ್ವಚ್ಛತೆಗೆ ಸಂಬಂಧಿಸಿದ ಯಂತ್ರಗಳು ಅಥವಾ ಉಪಕರಣಗಳು ಕೆಳಹಂತದವರೆಗೆ ತಲುಪುವುದೇ ಇಲ್ಲ. ಆಗ ಮಾನವಶಕ್ತಿಯ ಬಳಕೆ ಮಾಡಲಾಗುತ್ತದೆ. ಒಳಚರಂಡಿ ಮತ್ತು ಮಲಗುಂಡಿ ಸ್ವಚ್ಛತೆಗೆ ಮಾನವಶಕ್ತಿಯನ್ನು ಬಳಸದೆ, ಯಂತ್ರಗಳ ಮುಖೇನ ಕೆಲಸ ಮಾಡಿಸಿ ಎಂದು ನ್ಯಾಯಾಲಯಗಳು ಕೂಡ ಹಲವು ಸಂದರ್ಭಗಳಲ್ಲಿ ಹೇಳಿವೆ. ಆದರೆ, ಸಂಬಂಧಪಟ್ಟ ವ್ಯವಸ್ಥೆ ಎಚ್ಚೆತ್ತುಕೊಳ್ಳದಿರುವುದು ಶೋಚನೀಯ.

ಕೇಂದ್ರ ಸರ್ಕಾರ 2022ರಲ್ಲಿ ಲೋಕಸಭೆಗೆ ನೀಡಿದ ಅಂಕಿಅಂಶಗಳ ಪ್ರಕಾರ, ದೇಶದಾದ್ಯಂತ ಕಳೆದ ಐದು ವರ್ಷಗಳಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ವೇಳೆ 347 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಉತ್ತರಪ್ರದೇಶ, ತಮಿಳುನಾಡು ಮತ್ತು ದೆಹಲಿಯಲ್ಲಿ ಶೇಕಡ 40ರಷ್ಟು ಪ್ರಕರಣಗಳು ವರದಿಯಾಗಿವೆ. ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್​ಗಳ ಸ್ವಚ್ಛತೆಗೆ ಪರ್ಯಾಯ ಮಾರ್ಗಗಳನ್ನು ಹುಡುಕಲು ಇದು ಸಕಾಲ. ಪ್ರಸಕ್ತ ಕಾಲಘಟ್ಟದಲ್ಲಿ ಎಲ್ಲ ರಂಗಗಳಲ್ಲಿ ತಂತ್ರಜ್ಞಾನದ ಬಳಕೆ ಹಾಸುಹೊಕ್ಕಾಗಿದೆ. ಪರಿಣಾಮ, ಕೆಲಸದ ಸ್ವರೂಪವೂ ಬದಲಾಗಿ, ಮಾನವನ ಹಸ್ತಕ್ಷೇಪ ಪ್ರಮಾಣ ಕಡಿಮೆಯಾಗಿದೆ. ಈಗಂತೂ, ಒಂದು ಹೆಜ್ಜೆ ಮುಂದೆ ಹೋಗಿ ಕೃತಕ ಬುದ್ಧಿಮತ್ತೆ ಮುಖಾಂತರ ಇನ್ನಷ್ಟು ಕೆಲಸಗಳನ್ನು ಸಾಕಾರಗೊಳಿಸಲಾಗುತ್ತಿದೆ. ಹೀಗಿರುವಾಗ ಸ್ವಚ್ಛತೆಯ ಕೆಲಸದಲ್ಲಿ ತಂತ್ರಜ್ಞಾನದ ಸಹಾಯ ಪಡೆಯಲು ಆಡಳಿತಗಳು ಏಕೆ ಹಿಂದೇಟು ಹಾಕುತ್ತಿವೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಸಿಗುತ್ತಿಲ್ಲ. ಕೋಲಾರ ಜಿಲ್ಲೆಯ ಘಟನೆ ಎಲ್ಲರ ಕಣ್ಣು ತೆರೆಸಲಿ. ಭವಿಷ್ಯದಲ್ಲಿ ಇಂಥ ಕೃತ್ಯಗಳು ಮರುಕಳಿಸದಿರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net