ಸಂಪಾದಕೀಯ| ವಿದ್ಯಾರ್ಥಿಗಳ ಹಿತ ರಕ್ಷಿಸಿ

Exam
Published on

ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ಗುರುವಾರ ನಡೆದ ಮೊದಲ ದಿನದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವಿವಾದಕ್ಕೆ ಕಾರಣವಾಗಿದೆ. ಮೊದಲ ದಿನದ ಬೆಳಗಿನ ಅವಧಿಯಲ್ಲಿ ನಡೆದ ಜೀವಶಾಸ್ತ್ರ ಪರೀಕ್ಷೆಯಲ್ಲಿ ಕನಿಷ್ಠ 10 ಹಾಗೂ ಗಣಿತ ಪರೀಕ್ಷೆಯಲ್ಲಿ 11 ಪ್ರಶ್ನೆಗಳು ಪಠ್ಯಕ್ರಮದ ಹೊರತಾಗಿದ್ದವೆಂದು ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಶುಕ್ರವಾರ ನಡೆಯಲಿರುವ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳಲ್ಲಿಯೂ ಇದೇ ಎಡವಟ್ಟು ಮುಂದುವರಿದರೆ ಹೇಗೆ ಎಂಬ ಆತಂಕವೂ ನೆಲೆಸಿದೆ.

ಪಠ್ಯಕ್ರಮಕ್ಕೆ ಹೊರತಾದ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಹಲವಾರು ವಿದ್ಯಾರ್ಥಿಗಳು ದೂರಿರುವುದರಿಂದ ಈ ಬಗ್ಗೆ ಶಿಕ್ಷಣ ಇಲಾಖೆ ತಕ್ಷಣ ಗಮನ ಹರಿಸಬೇಕಾಗಿದೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ. ಏಕೆಂದರೆ, ಇದು ಒಬ್ಬಿಬ್ಬರು ಅಭ್ಯರ್ಥಿಗಳ ಪ್ರಶ್ನೆಯಲ್ಲ. ಸುಮಾರು 3.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದೆ. ಶೈಕ್ಷಣಿಕ ಜೀವನದ ಮಹತ್ವದ ಘಟ್ಟವೆಂದು ಪರಿಗಣಿಸಲ್ಪಡುವ ಸಿಇಟಿ ಪರೀಕ್ಷೆಗಾಗಿ ವಿದ್ಯಾರ್ಥಿಗಳು ತಿಂಗಳುಗಟ್ಟಲೇ ತಯಾರಿ ನಡೆಸಿರುತ್ತಾರೆ, ಶ್ರಮ ಹಾಕಿರುತ್ತಾರೆ. ಅಲ್ಲದೆ, ಮುಂದಿನ ಶೈಕ್ಷಣಿಕ ಬದುಕಿಗಾಗಿ ಕನಸುಗಳನ್ನು ಹೆಣೆದಿರುತ್ತಾರೆ. ಆದರೆ, ಪರೀಕ್ಷಾ ಮಂಡಳಿ ಅಥವಾ ಪ್ರಶ್ನೆಪತ್ರಿಕೆ ರೂಪಿಸುವವರು ಮಾಡುವ ಅಧ್ವಾನದಿಂದ ವಿದ್ಯಾರ್ಥಿಗಳು ಪರಿತಪಿಸುವಂತಾಗಬಾರದು.

ಹೊಸ ಪಠ್ಯಕ್ರಮ ಪ್ರಕಟಿಸಿದ್ದ ಎನ್​ಸಿಇಆರ್​ಟಿ ಕೈಬಿಟ್ಟಿರುವ ಪಠ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿತ್ತು. ಜತೆಗೆ, ಅವುಗಳನ್ನು ಬೋಧಿಸದಂತೆ ಮತ್ತು ಪರೀಕ್ಷೆಗೆ ಆ ಪಠ್ಯದಿಂದ ಪ್ರಶ್ನೆಗಳನ್ನು ಕೇಳದಂತೆ ಕೂಡ ಸೂಚಿಸಿತ್ತು. ಹೀಗಿದ್ದರೂ, ಕೈ ಬಿಟ್ಟಿರುವ ಪಠ್ಯದ ಪ್ರಶ್ನೆಗಳನ್ನು ಕೇಳಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಪಠ್ಯಕ್ರಮಕ್ಕೆ ಹೊರತಾದ ಪ್ರಶ್ನೆಗಳಿದ್ದುದರ ಬಗ್ಗೆ ಆಂತರಿಕ ವಿಚಾರಣೆ ನಡೆಸಬೇಕು. ವಿದ್ಯಾರ್ಥಿಗಳ ಹಿತರಕ್ಷಣೆ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ಕೈಬಿಟ್ಟು ಉಳಿದವನ್ನು ಪರಿಗಣಿಸುವುದು, ವಿದ್ಯಾರ್ಥಿಗಳಿಗೆ ಸೂಕ್ತ ಕೃಪಾಂಕ ನೀಡುವುದು ಅಥವಾ ಮರುಪರೀಕ್ಷೆ ನಡೆಸುವುದು. ಈ ಆಯ್ಕೆಗಳ ಪೈಕಿ ಯಾವುದಾದರೊಂದು ವಿದ್ಯಾರ್ಥಿಸ್ನೇಹಿ ಹೆಜ್ಜೆಯನ್ನು ಇರಿಸಬೇಕು.

ಗ್ರಾಮಾಂತರ ಪ್ರದೇಶದ ಮತ್ತು ಸರ್ಕಾರಿ ಕಾಲೇಜುಗಳ ಬಹುತೇಕ ಮಕ್ಕಳು ಕೋಚಿಂಗ್ ಪಡೆಯದೆ ತಾವೇ ಸಿದ್ಧತೆ ನಡೆಸಿ ಪರೀಕ್ಷೆ ಬರೆಯುತ್ತಾರೆ ಮತ್ತು ಪಠ್ಯಕ್ರಮವನ್ನಷ್ಟೇ ಓದಿಕೊಂಡಿರುತ್ತಾರೆ. ಇಂಥ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಿದೆ. ಪರೀಕ್ಷೆಯ ಮೊದಲ ದಿನವೇ ಎಡವಟ್ಟು ಸಂಭವಿಸಿರುವುದರಿಂದ, ಮುಂದಿನ ಪರೀಕ್ಷೆಯಲ್ಲಿ ಹೀಗಾಗದಂತೆ ಶಿಕ್ಷಣ ಇಲಾಖೆ ಎಚ್ಚರ ವಹಿಸಬೇಕು. ತಜ್ಞರ ಸಲಹೆ, ಮಾರ್ಗದರ್ಶನ ಪಡೆದು ಈ ಪ್ರಮಾದವನ್ನು ಸರಿಪಡಿಸಲು ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net