ಸಂಪಾದಕೀಯ| ಅಕ್ರಮ ವಲಸೆ ತಡೆಗಟ್ಟಿ

US AirForce
Published on

ಭಾರತದ 200ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಟೆಕ್ಸಾಸ್​ನಿಂದ ಬುಧವಾರ ಪಂಜಾಬ್​ನ ಅಮೃತಸರಕ್ಕೆ ಬಂದಿಳಿದಿದೆ. ಇಂತಹ ಇನ್ನೂ ಹತ್ತಾರು ವಿಮಾನಗಳು ಇನ್ನೊಂದು ತಿಂಗಳಲ್ಲಿ ಭಾರತಕ್ಕೆ ಬಂದಿಳಿಯಲಿವೆ. ಅಮೆರಿಕದ ಬಳಿ ಈಗಾಗಲೇ ಹದಿನೈದು ಲಕ್ಷ ವಿದೇಶಿ ಅಕ್ರಮ ವಲಸೆಗಾರರ ಪಟ್ಟಿ ಇದೆ. ಅದರಲ್ಲಿ ಹದಿನೆಂಟು ಸಾವಿರ ಭಾರತೀಯರಿದ್ದಾರೆ ಎನ್ನಲಾಗಿದೆ. ಅಮೆರಿಕದಲ್ಲಿರುವ ಏಳೂವರೆ ಲಕ್ಷ ಭಾರತೀಯರ ಸಂಖ್ಯೆಗೆ ಹೋಲಿಸಿದರೆ ಇದು ಏನೇನೂ ಅಲ್ಲ. ತಮ್ಮ ಪ್ರಜೆಗಳನ್ನು ಮಿಲಿಟರಿ ವಿಮಾನದಲ್ಲಿ ಕಳಿಸಿದ್ದಕ್ಕೆ ಕೆಲವು ದೇಶಗಳು ಈಗಾಗಲೇ ಅಮೆರಿಕದೆದುರು ಪ್ರತಿಭಟನೆಯನ್ನು ದಾಖಲಿಸಿವೆ. ಆದರೆ ಭಾರತ ಅಂತಹ ಕ್ರಮಕ್ಕೆ ಮುಂದಾಗಿಲ್ಲ. ಅಮೆರಿಕದವರು ನಮ್ಮ ಪ್ರಜೆಗಳನ್ನು ಎಲ್ಲ ಸೌಲಭ್ಯಗಳಿರುವ ಒಳ್ಳೆಯ ಖಾಸಗಿ ವಿಮಾನದಲ್ಲಿ ಕಳಿಸಿದರೋ, ಸೌಲಭ್ಯಗಳೇ ಇಲ್ಲದ ಮಿಲಿಟರಿ ವಿಮಾನದಲ್ಲಿ ಕಳಿಸಿದರೋ ಎಂಬುದು ಹೆಚ್ಚಿನ ಮಹತ್ವ ಪಡೆದುಕೊಳ್ಳುವುದಕ್ಕಿಂತ, ನಿಜಕ್ಕೂ ನಾವು ಗಮನ ಹರಿಸಬೇಕಾಗಿರುವುದು - ಅಕ್ರಮ ವಲಸೆಯನ್ನು ತಡೆಯುವುದರ ಬಗ್ಗೆ.

ಭಾರತದಲ್ಲಿ ತಮಗೆ ಬೇಕಾದ ಉದ್ಯೋಗ ದೊರೆಯದ ಕಾರಣದಿಂದಲೇ ಇವರೆಲ್ಲ ಅನಿವಾರ್ಯವಾಗಿ ಬೇರೆ ದೇಶಕ್ಕೆ ಹೋದವರು. ಹಾಗೆ ನೋಡಿದರೆ, ಅಮೆರಿಕದಲ್ಲಿರುವುದಕ್ಕಿಂತ ಹೆಚ್ಚು ಭಾರತೀಯ ಅಕ್ರಮ ವಲಸಿಗರು ರಷ್ಯಾ-ಯೂಕ್ರೇನ್​ನ ಯುದ್ಧಗ್ರಸ್ತ ಗಡಿಯಲ್ಲಿ, ಕೆನಡಾದಲ್ಲಿ, ಯೂರೋಪ್​ನಲ್ಲಿ ಇದ್ದಾರೆ. ಅದಲ್ಲದೆ, ಅಮೆರಿಕ ಸರ್ಕಾರ ತನ್ನ ದೇಶದಲ್ಲಿರುವ ಅಕ್ರಮ ವಲಸಿಗರನ್ನು ಭಾರತಕ್ಕೆ ವಾಪಸ್ ಕಳಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಒಂದು ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಅಕ್ರಮ ಭಾರತೀಯ ವಲಸಿಗರನ್ನು ಅದು ಭಾರತಕ್ಕೆ ವಾಪಸ್ ಕಳಿಸಿದೆ. ಕಳೆದ ವರ್ಷದ ಅಕ್ಟೋಬರ್​ನಲ್ಲೂ ಸುಮಾರು ನೂರು ಜನ ಅಕ್ರಮ ವಲಸಿಗರು ಅಮೆರಿಕದಿಂದ ಪಂಜಾಬ್​ಗೆ ಬಂದಿಳಿದಿದ್ದಾರೆ. ಆಗೆಲ್ಲ ಇದು ದೊಡ್ಡ ಸುದ್ದಿಯಾಗಲೇ ಇಲ್ಲ.

ಇದೀಗ ಡೊನಾಲ್ಡ್ ಟ್ರಂಪ್ ತಮ್ಮ ದೇಶದಲ್ಲಿರುವ ಅಕ್ರಮ ವಿದೇಶಿ ವಲಸಿಗರನ್ನು ಹೊರಗೆ ಹಾಕುವುದಾಗಿ ಚುನಾವಣೆ ಸಮಯದಲ್ಲಿ ಘೊಷಣೆ ಮಾಡಿದ್ದರಿಂದ ಮತ್ತು ಅಧಿಕಾರ ವಹಿಸಿಕೊಂಡ ತಕ್ಷಣ ಅದನ್ನು ಜಾರಿ ಮಾಡುತ್ತಿರುವುದರಿಂದ ಈ ವಿಷಯ ಹೆಚ್ಚು ಮಹತ್ವ ಪಡೆದು ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಇದು ಅಮೆರಿಕದಲ್ಲಿ ಕಾನೂನುಬದ್ಧವಾಗಿ ನೆಲೆಸಿರುವ ಮತ್ತು ಅಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಹೆಸರು ಗಳಿಸಿರುವ ಲಕ್ಷಾಂತರ ಭಾರತೀಯರಿಗೆ ನೋವು ತರುವುದು ಸಹಜ. ಅಮೆರಿಕದಲ್ಲಿ ಭಾರತೀಯರದು ಪ್ರತಿಷ್ಠಿತ ಸಮುದಾಯ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತು ಇದೀಗ ರಾಜಕೀಯವಾಗಿಯೂ ಭಾರತೀಯರನ್ನು ಸರಿಗಟ್ಟುವ ಇನ್ನೊಂದು ವಿದೇಶಿ ಸಮುದಾಯ ಅಮೆರಿಕದಲ್ಲಿ ಇಲ್ಲ. ಆದರೂ ಅಕ್ರಮ ವಲಸಿಗರನ್ನು ಹೊರಕಳಿಸುವಾಗ ನಿಕೃಷ್ಟ ರೀತಿಯಲ್ಲಿ ಕಳಿಸಿದರೆ ಭಾರತೀಯರ ವರ್ಚಸ್ಸಿಗೆ ಧಕ್ಕೆಯಾದಂತಲ್ಲವೇ? ಹಾಗೆಂದು ಅಮೆರಿಕದೊಂದಿಗೆ ಸಂಘರ್ಷಕ್ಕಿಳಿಯುವ ಕಾಲ ಇದಲ್ಲ. ಅದರ ಬದಲು ಅಕ್ರಮ ವಲಸೆಯ ಸಮಸ್ಯೆಗೆ ಇತಿಶ್ರೀ ಹಾಡುವುದರತ್ತ ಕೇಂದ್ರ ಸರ್ಕಾರ ಗಮನ ಹರಿಸಬೇಕು. ಒಂದು ಅಂದಾಜಿನ ಪ್ರಕಾರ ತೊಂಬತ್ತು ಸಾವಿರಕ್ಕೂ ಹೆಚ್ಚು ಭಾರತೀಯರು ಪ್ರತಿ ವರ್ಷ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವ ಸಂದರ್ಭದಲ್ಲಿ ಸಿಕ್ಕಿಬೀಳುತ್ತಿದ್ದಾರೆ. ಕೆಲವೊಮ್ಮೆ ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ. ಹಾಗಾಗಿ ಭಾರತದಿಂದ ಅವರನ್ನು ಅಕ್ರಮವಾಗಿ ವಿದೇಶಕ್ಕೆ ಕಳಿಸುತ್ತಿರುವ ಜಾಲಗಳನ್ನು ಮೊದಲು ಮಟ್ಟ ಹಾಕಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net